ಕುಮಟಾ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಅವರ ಮುಂದೆ ಜಿಲ್ಲಾ ಬಿಜೆಪಿ ೧೦ ಪ್ರಶ್ನೆಗಳನ್ನು ಮುಂದಿಟ್ಟಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಮತಯಾಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮೇ ೩ರಂದು ಕುಮಟಾಕ್ಕೆ ಆಗಮಿಸಲಿದ್ದಾರೆ. ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ ೩.೧೫ಕ್ಕೆ ನಡೆಯುವ ಸಭೆಯಲ್ಲಿ ಭಾಗವಹಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈ ಜಿಲ್ಲೆಯ ಜಿಲ್ಲೆಯ ಜನತೆಯ ಪರವಾಗಿ ಜಿಲ್ಲಾ ಬಿಜೆಪಿ ೧೦ ಬಹಿರಂಗ ಪ್ರಶ್ನೆಗಳನ್ನು ಕೇಳಿದೆ.
೧) ಬರಗಾಲ ಮತ್ತು ನೀರಿನ ಸಮಸ್ಯೆಗೆ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಏನು ಪರಿಹಾರ ಕೊಟ್ಟಿದ್ದೀರಿ? ಬರಗಾಲದಿಂದ ಹಾನಿಗೊಳಗೊಂಡ ರೈತರಿಗೆ ಎಷ್ಟು ಬೆಳೆ ಪರಿಹಾರ ಕೊಟ್ಟಿದ್ದೀರಿ?
೨) ಈ ಹಿಂದೆ ರಾಜ್ಯ ಬಿಜೆಪಿ ಸರಕಾರ ತನ್ನ ಬಜೆಟ್ ನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಘೋಷಣೆ ಮಾಡಿದ್ದ ಮುಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪರಿಸರ ವಿಶ್ವವಿದ್ಯಾಲಯ ಸ್ಥಾಪನೆಯನ್ನು ಏಕೆ ಕೈ ಬಿಟ್ಟಿದ್ದೀರಿ?
೩) ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಎಷ್ಟು ಹೊಸ ಅನುದಾನವ ನೀಡಿದ್ದೀರಿ?
೪) ಹಿಂದೂ ಅಮಾಯಕ ಕಾರ್ಯಕರ್ತರ ಮೇಲೆ ಅನವಶ್ಯಕವಾಗಿ ರಾಜಕೀಯ ಪ್ರೇರಿತವಾಗಿ ಪ್ರಕರಣಗಳನ್ನು ಏಕೆ ದಾಖಲಿಸುತ್ತಿದ್ದೀರಿ?
೫) ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನು ನಿಲ್ಲಿಸಿದ್ದಲ್ಲದೆ ಹೈನುಗಾರಿಕೆ ಪ್ರೋತ್ಸಾಹಧನಕ್ಕೆ ಯಾಕೆ ಅನುದಾನ ನೀಡುತ್ತಿಲ್ಲ?
೬) ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅರಣ್ಯ ಅತಿಕ್ರಮಣದಾರರ ಹಿತ ರಕ್ಷಣೆಗಾಗಿ ಯಾವ ಕ್ರಮ ಕೈಗೊಂಡಿದ್ದೀರಿ?
೭) ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ನೆರೆಯ ಅನನುಕೂಲತೆ ತಪ್ಪಿಸಲು, ಪರಿಹಾರಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?
೮) ಮೀನುಗಾರರ ಹಿತ ರಕ್ಷಣೆಗೆ ಮತ್ತು ಅನುಕೂಲಕ್ಕೆ ಯಾವ ರೀತಿಯ ಕ್ರಮ ಕೈಗೊಂಡಿದ್ದೀರಿ?
೯) ವಿದ್ಯುತ್, ನೀರು, ಬಸ್, ನೋಂದಣಿ, ವಾಹನ ತೆರಿಗೆ ಇನ್ನಿತರ ದರವನ್ನು ಹೆಚ್ಚಿಸಿ ಎಲ್ಲಾ ಬೆಲೆ ಏರಿಕೆ ಮಾಡಿ ನಿಮ್ಮ ಗ್ಯಾರಂಟಿಗಾಗಿ ಸಂಗ್ರಹಿಸುತ್ತಿರುವ ಹೆಚ್ಚಿನ ಹಣ ಏನು ಮಾಡಿದಿರಿ?
೧೦) ಕೇವಲ ಕಾಂಗ್ರೆಸ್ಸಿನ ಗ್ಯಾರಂಟಿಯಿಂದಲೇ ಜನರು ತಮ್ಮ ಜೀವನವನ್ನು ಮಾಡುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿರುವ ನಿಮ್ಮ ಆಡಳಿತದ ಅವಧಿಯಲ್ಲಿ ಮಹಿಳೆಯರ ರಕ್ಷಣೆಗೆ ಯಾವ ಗ್ಯಾರಂಟಿ ನೀಡಿದ್ದೀರಿ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿನಾಕಾರಣ ಆರೋಪ ಮಾಡುವ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಈ ಮೇಲಿನ ಪ್ರಶ್ನೆಗಳ ಜೊತೆಗೆ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಏನು ಕೊಡುಗೆ ಕೊಟ್ಟಿದೆ ಎಂಬುದರ ಬಗ್ಗೆ ಜನರಿಗೆ ಉತ್ತರವನ್ನು ನೀಡಲಿ. ಉತ್ತರ ಕನ್ನಡದ ಜನತೆಯ ಅಭಿವೃದ್ಧಿಗೆ ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ತಾನು ಮಾಡಿರುವ ಕೆಲಸಗಳ ಕುರಿತು ಉತ್ತರಿಸಲಿ.
– ಸದಾನಂದ ಭಟ್ಟ, ಬಿಜೆಪಿ ಜಿಲ್ಲಾ ವಕ್ತಾರ
ಇದನ್ನೂ ಓದಿ : ಸಮುದ್ರ ಪಾಲಾಗುತ್ತಿದ್ದ ೧೫ ವರ್ಷದ ಬಾಲಕನ ರಕ್ಷಿಸಿದ ೧೨ರ ಬಾಲಕ!