ಭಟ್ಕಳ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭಟ್ಕಳ ತಾಲೂಕಿನ ವಿವಿಧ ಕಡೆಗಳಲ್ಲಿ ಗುರುವಾರ ಬಿರುಸಿನ‌ ಪ್ರಚಾರ ನಡೆಸಿ, ಕಾರ್ಯಕರ್ತರ ಸಭೆ ನಡೆಸಿದರು.

ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

 

ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ

ಮುರುಡೇಶ್ವರದ ಓಲಗ ಮಂಟಪದಲ್ಲಿ ಮಾವಳ್ಳಿಮಹಾಶಕ್ತಿಕೇಂದ್ರ ಸಭೆ ನಡೆಸಿದರು. ಶ್ರೀ ಮುರುಡೇಶ್ವರ ದೇವಾಲಯಕ್ಕೆ ತೆರಳಿ, ದೇವರ ದರ್ಶನ ಪಡೆದರು. ಚಿತ್ರಾಪುರದ ಪರಿಜ್ಞಾನ ಸಭಾಭವನದಲ್ಲಿ ಶಿರಾಲಿ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದರು.

ದಿವಂಗತ ಎನ್.ಜಿ.ಕೊಲ್ಲೆ ಮನೆಗೆ ಭೇಟಿ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಮಧ್ಯಾಹ್ನ ಸೋನಾರಕೇರಿಯ ದೈವಜ್ಞ ಸಭಾಭವನದಲ್ಲಿ ನಗರ, ಜಾಲಿ ಮತ್ತು ಹೆಬ್ಳೆ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಈ ವೇಳೆ ಬಿಜೆಪಿ ಹಿರಿಯ ಧುರೀಣರಾಗಿದ್ದ ದಿವಂಗತ ಎನ್.ಜಿ.ಕೊಲ್ಲೆ ಮನೆಗೆ ಭೇಟಿ ನೀಡಿದರು. ಎನ್.ಜಿ. ಕೊಲ್ಲೆಯವರ ಜೊತೆಗಿನ ಒಡನಾಟವನ್ನು ಕಾಗೇರಿ ಸ್ಮರಿಸಿಕೊಂಡರು. ಆಸರಕೇರಿ ನಿಚ್ಛಲಮಕ್ಕಿ ವೆಖಟರಮಣ ದೇವಸ್ಥಾನಕ್ಕೂ ಭೇಟಿ ನೀಡಿ, ದೇವರ ದರ್ಶನ ಪಡೆದರು. ಇದಾದ ನಂತರ ಸರ್ಪನಕಟ್ಟೆಯ ಗಣೇಶ ಮಂಟಪದಲ್ಲಿ ಬೆಳಕೆ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ನಡೆಯಿತು. ಈ ಎಲ್ಲ ಸಭೆಗಳಲ್ಲಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಯವರೊಂದಿಗೆ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮುಖಂಡ ಜಿ.ಜಿ.ಹೆಗಡೆ, ಪಕ್ಷದ ಪ್ರಮುಖರು ಇದ್ದರು.

ಆಸರಕೇರಿಯ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ.

ಕಾರ್ಯಕರ್ತರ ಸಭೆಗಳಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ದೇಶ, ಧರ್ಮ, ನಾವು ಎಂದು ಹೇಳಿಕೊಂಡು ಮತಗಳನ್ನು ಒಂದು ಕಡೆ ಮಾಡಲು ಬಿಜೆಪಿಗರಿಗೆ ಸಾಧ್ಯವಾಗುತ್ತಿಲ್ಲ.‌ ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ನವರು ಕೊನೆಯ ಕ್ಷಣದಲ್ಲಿ ಹಣ, ಸುಳ್ಳು ಗ್ಯಾರಂಟಿ ನೀಡುವುದು‌. ಇದರಿಂದ ಮೋದಿಯವರಿಗೆ ಕೈಕೊಟ್ಟು ದೇಶವನ್ನು ಅಪಾಯಕ್ಕೆ ತಳ್ಳಿದಂತೆ. ಕಾರಣ ಇದನ್ನು ಜನರಿಗೆ ತಿಳಿಸಿ ಮತ ಮಾರಾಟ ಆಗದಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಹೇಳಿದಂತೆ ಎಲ್ಲಾ ಕಡೆ ಬರುತ್ತದೆ. ಕಾರಣ ನಾವು ಜಾಗೃತರಾಗಬೇಕು. ರಾಮ ಮಂದಿರ ಭೂಮಿ ಪೂಜೆಗೆ ಬಾರದವರು,  ಉದ್ಘಾಟನೆಗೆ ಬಾರದವರು ಕೇಸರಿ ಪೇಟ ಸುತ್ತಿಕೊಂಡು ಓಡಾಡುವುದು ದೊಡ್ಡ ವಿಷಯ ಆಗಬಾರದು. ನಮ್ಮ ಹೃದಯದಲ್ಲಿ ರಾಮ ಇರಬೇಕು ಎಂದು ಕಾಗೇರಿ ಡಾ.ಅಂಜಲಿ ನಾಮಪತ್ರ ವೇಳೆ ಕೇಸರಿಪೇಟ ತೊಟ್ಟಿದ್ದನ್ನು ಪರೋಕ್ಷವಾಗಿ ಟೀಕಿಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ನಾನು ನಿಮಿತ್ತ ಮಾತ್ರ. ನಾನು ಗೆಲ್ಲುವುದು ಎಂದರೆ ಮೋದಿಜಿಯವರು ಪ್ರಧಾನಿಯಾದಂತೆ. ಅವರು ಪ್ರಧಾನಿ ಆದಲ್ಲಿ ದೇಶದ ರಕ್ಷಣೆ, ಸನಾತನ ಧರ್ಮಕ್ಕೆ ರಕ್ಷಣೆ ಸಿಗುವುದು. ದೇಶ ಮತ್ತು ಧರ್ಮದ ರಕ್ಷಣೆಗೆ   ಮತ ಮಾರಾಟ ಮಾಡಬಾರದು. ಒಂದು ಮತಕ್ಕೆ ೫೦೦ ರೂ ಪಡೆದರೆ ೫ ವರ್ಷಕ್ಕೆ ನಿಗದಿ ಪಡಿಸಿದಲ್ಲಿ ದಿನಕ್ಕೆ ಕೇವಲ ೨೫ ಪೈಸೆ ಬರಲಿದೆ. ಅದಕ್ಕಾಗಿ ನಮ್ಮ ಮತವನ್ನು ಕಾಂಗ್ರೆಸ್ ಗೆ ನೀಡಿದಲ್ಲಿ ಧರ್ಮ, ದೇಶದ ರಕ್ಷಣೆ ಅಸಾಧ್ಯ ಎಂದರು.

ಭಟ್ಕಳದಲ್ಲಿ ಸುಮಾರು ೩೩ ಬೂತ್ ಗಳಲ್ಲಿ ಒನ್ ಸೈಡ್ ವೋಟ್ ಆಗುತ್ತದೆ. ನಿಮ್ಮೆಲ್ಲರಿಗೂ ತಿಳಿದ ವಿಚಾರ. ಹೀಗೆ ಮುಂದುವರಿದರೆ ನಮ್ಮ ದೇಶದ ಪರಿಸ್ಥಿತಿ ಏನಾಗಬಹುದು ನೀವೇ ಅರ್ಥಮಾಡಿಕೊಳ್ಳಿ. ನಿರ್ಮಾಣ ಮಾಡಿರುವ ರಾಮಮಂದಿರ ಮುಂದೆ ಉಳಿಯಬೇಕಾದರೆ ನಾವು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಬೆಂಬಲಿಸಬೇಕು ಎಂದರು.

 ನಮಗೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ಅದಕ್ಕಾಗಿ ದುಡಿಯಬೇಕು‌. ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನಮ್ಮೆಲ್ಲ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಮೊದಲು ನಮ್ಮ ದೇಶದಲ್ಲಿ ಪ್ರಧಾನಿ ಬೇರೆ ದೇಶಕ್ಕೆ ಹೋಗುತ್ತಾರೆ ಅಂದರೆ ಸಾಲ ತರಲಿಕ್ಕೆ ಹೋಗುತ್ತಾರೆ ಅಂತಿದ್ದರು. ಆದರೆ ಈವಾಗ ಹಾಗೆ ಅಲ್ಲ. ಮೋದಿ ಬರುವಿಕೆಗೆ  ಬೇರೆ ದೇಶದವರು ಕಾಯುತ್ತಾ ಇರ್ತಾರೆ. ಮೋದಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ವಾಜಪೇಯಿವರು ಒಳ್ಳೆಯ ಕೆಲಸ ಮಾಡಿದ್ರು. ಆದರೂ ಸೋಲಿಸಿದ್ರು. ಆ ರೀತಿ ಈಗ ಹಾಗೆ ಮಾಡಬಾರದು‌.

– ಶಿವಾನಂದ ನಾಯ್ಕ, ಮಾಜಿ ಸಚಿವ

ಪಕ್ಷದ ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಭಟ್ಕಳ ಮಾತನಾಡಿ, ಬೂತ್ ಮಟ್ಟದ ಬಲವರ್ಧನೆ ಇಂದಿನಿಂದಲೇ ಪ್ರಾರಂಭ ಮಾಡಬೇಕಾಗಿದೆ. ನಮಗೆ ಮೋದಿ ಗ್ಯಾರಂಟಿ ಮುಖ್ಯ. ೩೭೦ನೇ ವಿಧಿ, ರಾಮ ಮಂದಿರ ಈಡೇರಿಸಿದೆ. ಭಾರತ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.
ಮಾಜಿ ಶಾಸಕ‌ ಸುನೀಲ ನಾಯ್ಕ ಮಾತನಾಡಿ, ಲೋಕಸಭೆ ಚುನಾವಣೆಗೆ ಕಡಿಮೆ ಅವಧಿ  ಇದೆ. ಮೋದಿಯವರ ಹವಾ ಇದೆ ಎಂಬ ಆತ್ಮವಿಶ್ವಾಸ ವನ್ನು  ಇಟ್ಟುಕೊಂಡಿದ್ದೇವೆ. ಅದರ ಜೊತೆಗೆ ಕಾರ್ಯಕರ್ತರು ಮನೆಮನೆಗೆ ಹೋಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಗೆ ತೆರಳಿ ಮುಟ್ಟಿಸಬೇಕಾದ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆ ಬಗ್ಗೆ ಸುಳ್ಳು ಹೇಳಿ ಮತ ಕೇಳುತ್ತಿದೆ. ಆದರೆ ನಮಗೆ ಸುಳ್ಳು ಹೇಳಿ ಮತ ಕೇಳಬೇಕು ಎಂಬ ಅನಿವಾರ್ಯತೆ ಇಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿ ಮನೆಗೆ ತಲುಪಿದೆ. ಕರೋನಾ ಸಂದರ್ಭದಲ್ಲಿ ನಮ್ಮ ದೇಶವನ್ನು ಯಾವ ರೀತಿ ನಿರ್ವಹಣೆ ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾರ್ಯಕರ್ತರು ಎಲ್ಲಾ ಯೋಜನೆಗಳನ್ನು ಮನೆಗೆ ಮನೆಗೆ ತೆರಳಿ ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ ಎಂದರು.