ಭಟ್ಕಳ ಡೈರಿ ವರದಿ

ಭಟ್ಕಳ: ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ, ಬೆಂಗಳೂರು ವತಿಯಿಂದ ಸಾಮಾಜಿಕ ಪರಿಶೋಧನಾ ನಿರ್ದೇಶಕ ಸಿ ಕೆ ಮಲ್ಲಪ್ಪ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಾಮಾಜಿಕ ಪರಿಶೋಧನೆಯ ಪ್ರಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನೆಯ ವಿವಿಧ ಹಂತಗಳು, ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳು ಹಾಗೂ ಪ್ರಗತಿಯ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ಸಾಮಾಜಿಕ ಪರಿಶೋಧನಾ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದ ಅವರು, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಾಮಾಜಿಕ ಪರಿಶೋಧನೆಯ ಮಹತ್ವ ಹಾಗೂ ಅನುಷ್ಠಾನದ ಕುರಿತು ಸಲಹೆ-ಸೂಚನೆಗಳನ್ನು ನೀಡಿದರು. ಬಳಿಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ವಿಬಿ-ಜಿಆರ್‌ಎಎಂ-ಜಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರನ್ನು ಭೇಟಿ ಮಾಡಿತು. ಈ ವೇಳೆ ಯೋಜನೆಯ ಅನುಷ್ಠಾನ, ಕೂಲಿ ಪಾವತಿ ಹಾಗೂ ಕೆಲಸದ ಅನುಭವದ ಕುರಿತು ಕೂಲಿಕಾರರಿಂದ ಮಾಹಿತಿ ಪಡೆಯಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಎಂ, ಡಿಪಿಎಂ ಜಿ ಐ ಹೆಗಡೆ, ತಾಲೂಕು ಸಂಪನ್ಮೂಲ ವ್ಯಕ್ತಿ ಉಮೇಶ ಮುಂಡಳ್ಳಿ, ಚಿದಾನಂದ ಗೌಡ ಹೊನ್ನಾವರ, ತಾಂತ್ರಿಕ ಸಂಯೋಜಕ ವಿನಾಯಕ ನಾಯಕ, ಎಇಇ ಗಣೇಶ, ತೋಟಗಾರಿಕೆ ಅಧಿಕಾರಿ ಶ್ರವಣ ಕುಮಾರ, ಪಿಡಿಒ ರಾಜೇಶ್ವರಿ ಚಂದಾವರ, ತಾಂತ್ರಿಕ ಸಹಾಯಕಿ ಜಯಶ್ರೀ ನಾಯ್ಕ, ವಿಆರ್‌ಪಿ, ಬಿಎಫ್‌ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸಾಮಾಜಿಕ ಪರಿಶೋಧನೆಯ ಮೂಲಕ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಜವಾಬ್ದಾರಿತನ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಳಕೆ ಗ್ರಾಮ ಪಂಚಾಯಿತಿಗೆ ನಡೆದ ಈ ಭೇಟಿ ಮಹತ್ವ ಪಡೆದಿದೆ.

ಇದನ್ನೂ ಓದಿ:

ಭಟ್ಕಳದಲ್ಲಿ ಸಮಾಜ ಸೇವಕರಿಂದ ಭಿಕ್ಷುಕನ ಅಂತ್ಯಕ್ರಿಯೆ

ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ ಯಶಸ್ವಿ

ಭಟ್ಕಳದಲ್ಲಿ ದಸರಾ ಕ್ರೀಡಾಕೂಟ ಆರಂಭ; ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗಿ