ಭಟ್ಕಳ ಡೈರಿ ವರದಿ
ಭಟ್ಕಳ: ಹಲವು ವರ್ಷಗಳಿಂದ ಭಟ್ಕಳ ನಗರ ಹಾಗೂ ರೈಲ್ವೆ ನಿಲ್ದಾಣದ ಸುತ್ತಮುತ್ತ ಭಿಕ್ಷಾಟನೆ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಅಂಗವಿಕಲ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡಿದರೂ ಎಂಟು ದಿನಗಳಾದರೂ ಯಾರೂ ಆಗಮಿಸದ ಹಿನ್ನೆಲೆಯಲ್ಲಿ ಸಮಾಜ ಸೇವಕರೇ ಮುಂದೆ ಬಂದು ಅಂತ್ಯಕ್ರಿಯೆ ನೆರವೇರಿಸಿದ ಹೃದಯವಿದ್ರಾವಕ ಘಟನೆ ಭಟ್ಕಳದಲ್ಲಿ ನಡೆದಿದೆ.
ಆಂಧ್ರಪ್ರದೇಶದ ವೆಲಗೂಡು ಕುಮಾಲ ನಿವಾಸಿ ದೊದೆಕೊಲಾ ಬುಕಾರಿ ತಂದೆ ಗೋಕಾರ ಸಾಬ (೫೬) ಮೃತರು. ಬುಕಾರಿ ಅವರು ಎರಡೂ ಕೈಕಾಲುಗಳ ಶಕ್ತಿ ಕಳೆದುಕೊಂಡಿದ್ದು, ವ್ಹೀಲ್ಚೇರ್ ಮೂಲಕ ಭಿಕ್ಷಾಟನೆ ಮಾಡುತ್ತಿದ್ದರು. ಕಳೆದ ಕೆಲ ದಿನಗಳಿಂದ ಭಟ್ಕಳ ರೈಲು ನಿಲ್ದಾಣದ ಪಕ್ಕದ ಅಂಗಡಿ ಕಟ್ಟೆಯ ಮೇಲೆ ಅನಾರೋಗ್ಯದಿಂದ ಮಲಗಿದ್ದರು. ಇದನ್ನು ಗಮನಿಸಿದ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಸ್ಥಳೀಯರ ಸಹಕಾರದೊಂದಿಗೆ ಆ.೨೮ರಂದು ಬುಕಾರಿ ಅವರನ್ನು ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಬಲಗೈ ಹಾಗೂ ಹೊಟ್ಟೆಯ ಬಲಭಾಗದಲ್ಲಿ ಗಾಯ: ಮೃತ ಬುಕಾರಿ ಅವರ ಬಲಗೈ ಹಾಗೂ ಹೊಟ್ಟೆಯ ಬಲಭಾಗದಲ್ಲಿ ಗಾಯವಾಗಿತ್ತು ಎನ್ನಲಾಗಿದೆ. ಬಲಗೈ ಕೊಳೆತ ಸ್ಥಿತಿಯಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿಯೂ ಅವರು ಇರಲಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆ ೩೦ರಂದು ರಾತ್ರಿ ಸುಮಾರು ೮ ಗಂಟೆಗೆ ಅವರು ಮೃತಪಟ್ಟಿದ್ದಾರೆ.
ಕುಟುಂಬಸ್ಥರಿಗೆ ಮಾಹಿತಿ ನೀಡಿದರೂ ಬರಲಿಲ್ಲ:
ಶವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಈ ಕುರಿತು ಭಟ್ಕಳ ನಗರ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿರುವ ಮೃತರ ಪತ್ನಿ, ಮಗ ಹಾಗೂ ಕುಟುಂಬಸ್ಥರಿಗೆ ಹಲವು ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ‘ಇಂದು ಬರುತ್ತೇವೆ, ನಾಳೆ ಬರುತ್ತೇವೆ’ ಎಂದು ಕುಟುಂಬಸ್ಥರು ತಿಳಿಸುತ್ತಿದ್ದರೂ ಎಂಟು ದಿನ ಕಳೆದರೂ ಅವರ ಪೈಕಿ ಯಾರೊಬ್ಬರೂ ಭಟ್ಕಳಕ್ಕೆ ಆಗಮಿಸಿರಲಿಲ್ಲ ಎನ್ನಲಾಗಿದೆ.
ಸಮಾಜ ಸೇವಕರಿಂದ ಅಂತ್ಯಕ್ರಿಯೆ: ಈ ಹಿನ್ನೆಲೆಯಲ್ಲಿ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅವರು ಭಟ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪಿಎಸ್ಐ ಸೋಮನಾಥ ರಾಠೋಡ, ಹೆಡ್ ಕಾನ್ಸ್ಟೆಬಲ್ ದೇವು ನಾಯ್ಕ ಹಾಗೂ ಕಾನ್ಸ್ಟೆಬಲ್ ಮಂಜುನಾಥ ಕೊಟಬಾಗಿ ಅವರು ಪಂಚರ ಸಮ್ಮುಖದಲ್ಲಿ ಮೃತದೇಹದ ಪರಿಶೀಲನೆ ನಡೆಸಿದರು. ನಂತರ ಸಮಾಜ ಸೇವಕರಾದ ಮಂಜು ನಾಯ್ಕ ಮುಟ್ಟಳ್ಳಿ, ಲಕ್ಷ್ಮೀಶ ನಾಯ್ಕ, ಮೋಹನ ದೇವಾಡಿಗ, ಲೈಫ್ ಕೇರ್ ಅಂಬುಲೆನ್ಸ್ ಚಾಲಕ ಮಾರುತಿ ನಾಯ್ಕ ಹಾಗೂ ಪುರಸಭೆಯ ಪೌರಕಾರ್ಮಿಕರ ಸಹಕಾರದೊಂದಿಗೆ ಮಂಜು ನಾಯ್ಕ ಅವರು ಮೃತ ಬುಕಾರಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು.
ಕುಟುಂಬದ ನೆರವಿಗಾಗಿ ಕಾಯುತ್ತಿದ್ದ ಬದುಕು:
ಬುಕಾರಿ ಅವರು ಭಿಕ್ಷಾಟನೆಯಿಂದ ಸಂಗ್ರಹಿಸುತ್ತಿದ್ದ ಹಣ ಹಾಗೂ ಆಂಧ್ರಪ್ರದೇಶ ಸರ್ಕಾರದಿಂದ ಪಡೆಯುತ್ತಿದ್ದ ಅಂಗವಿಕಲ ಮಾಸಾಶನದ ಹಣವನ್ನು ಆಂಧ್ರಪ್ರದೇಶದ ವೆಲಗೂಡಿನಲ್ಲಿರುವ ತಮ್ಮ ಕುಟುಂಬಸ್ಥರಿಗೆ ನೀಡುತ್ತಿದ್ದರು ಎನ್ನಲಾಗಿದೆ. ಆದರೆ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ನೆರವಿಗೆ ಬಾರದ ಕುಟುಂಬಸ್ಥರು, ಅಂತ್ಯಕ್ರಿಯೆಗೂ ಹಾಜರಾಗದಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ಜೀವನದುದ್ದಕ್ಕೂ ಕುಟುಂಬಕ್ಕಾಗಿ ದುಡಿದ ವ್ಯಕ್ತಿಯೊಬ್ಬರು ಕೊನೆಯುಸಿರಿನ ವೇಳೆಯೂ ಕುಟುಂಬಸ್ಥರಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಿಸಿದ್ದು, ಅಂತ್ಯಕ್ರಿಯೆಗೂ ಯಾರೂ ಬಾರದಿರುವುದು ಮಾನವೀಯ ಸಂಬಂಧಗಳ ಕುರಿತು ಪ್ರಶ್ನೆ ಮೂಡಿಸುವಂತಾಗಿದೆ.
ಇದನ್ನೂ ಓದಿ:
ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟ ಯಶಸ್ವಿ
ಭಟ್ಕಳದಲ್ಲಿ ದಸರಾ ಕ್ರೀಡಾಕೂಟ ಆರಂಭ; ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗಿ
