ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಪ್ರಸಿದ್ಧ ಮುರುಡೇಶ್ವರದ ಶ್ರೀ ಮ್ಹಾತೋಬಾರ ಮುರುಡೇಶ್ವರ ದೇವರ ಓಲಗ ಮಂಟಪದಲ್ಲಿ ಸಾರ್ವಜನಿಕ ಶ್ರೀ ಸಿದ್ಧಿವಿನಾಯಕ ಸೇವಾ ಟ್ರಸ್ಟ್ ವತಿಯಿಂದ ೫೦ನೇ ವರ್ಷದ ಸುವರ್ಣ ಸಂಭ್ರಮದ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ ೧೪ರಿಂದ ೨೪ರವರೆಗೆ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಶಂಕರ ಭಟ್ರಹಿತ್ಲು ತಿಳಿಸಿದ್ದಾರೆ. ಮುರುಡೇಶ್ವರದ ಓಲಗ ಮಂಟಪದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೫೦ನೇ ವರ್ಷದ ಗಣೇಶೋತ್ಸವದ ಪೂರ್ವತಯಾರಿ ಹಾಗೂ ೧೧ ದಿನಗಳ ಕಾಲ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

೧೯೭೭ರಲ್ಲಿ ಆರಂಭ: ೧೯೭೭ರಲ್ಲಿ ಊರಿನ ಸಂಘಟನೆಯೊಂದರ ಮೂಲಕ ಆರಂಭವಾದ ಸಾರ್ವಜನಿಕ ಗಣೇಶೋತ್ಸವವು ಇದೀಗ ೫೦ನೇ ವರ್ಷದ ಸುವರ್ಣ ಸಂಭ್ರಮವನ್ನು ತಲುಪಿದೆ. ಈ ಹಿನ್ನೆಲೆಯಲ್ಲಿ ಸುಮಾರು ೧ ಕೋಟಿ ರೂಪಾಯಿ ವೆಚ್ಚದಲ್ಲಿ ೧೧ ದಿನಗಳ ಕಾಲ ಬೃಹತ್ ಉತ್ಸವ ಆಯೋಜಿಸಲಾಗಿದೆ. ಉತ್ಸವದ ಅಂಗವಾಗಿ ಹಲವು ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ೧೧ ದಿನಗಳ ಪೈಕಿ ೫ ದಿನ ಭಕ್ತಾದಿಗಳಿಗೆ ವಿಶೇಷ ಅನ್ನದಾನ ಸೇವೆ ಇರಲಿದೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ: ಸೆಪ್ಟೆಂಬರ್ ೨೦ರಂದು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಸಾದ ನೇತ್ರಾಲಯದ ಸಹಯೋಗದಲ್ಲಿ ಒಂದು ದಿನದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ವೈವಿಧ್ಯಮಯ ವಸ್ತುಪ್ರದರ್ಶನವೂ ನಡೆಯಲಿದೆ.

ದೇವಸ್ಥಾನಕ್ಕೆ ಹಲವು ಸೌಲಭ್ಯಗಳ ಕೊಡುಗೆ: ಭಕ್ತಾದಿಗಳ ಕೊಡುಗೆಯಾಗಿ ದೇವಸ್ಥಾನಕ್ಕೆ ೨ ಸುಂದರ ಶಿವ ಸ್ತಂಭಗಳನ್ನು ನೀಡಲಾಗಿದೆ. ಭಕ್ತರು ಹಾಗೂ ದೇವಸ್ಥಾನ ಮಂಡಳಿಯ ಸಹಯೋಗದಲ್ಲಿ ೧೧ ಸ್ಟ್ರೀಟ್ ಲೈಟ್‌ಗಳನ್ನು ಅಳವಡಿಸಲಾಗಿದೆ. ದೇವಸ್ಥಾನದ ವತಿಯಿಂದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ೪ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.

ಸ್ಥಳೀಯರ ಸಹಕಾರದಿಂದ ಸುವರ್ಣ ಸಂಭ್ರಮ: ಊರಿನ ನಾಗರಿಕರ ಅಪಾರ ಶ್ರದ್ಧೆ, ಉತ್ಸಾಹ ಮತ್ತು ಸಹಕಾರದೊಂದಿಗೆ ೫೦ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ೧೧ ದಿನಗಳ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಶಂಕರ ಭಟ್ರಹಿತ್ಲು ಮನವಿ ಮಾಡಿದರು.

ಓಲಗ ಮಂಟಪದ ಜೀರ್ಣೋದ್ಧಾರದ ಹಿನ್ನೆಲೆ: ಸಮಿತಿಯ ಗೌರವಾಧ್ಯಕ್ಷ ಎಸ್ ಎಸ್ ಕಾಮತ ಅವರು ಮಾತನಾಡಿ, ಮುರುಡೇಶ್ವರ ಕ್ಷೇತ್ರದ ಇತಿಹಾಸ ಹಾಗೂ ಓಲಗ ಮಂಟಪದ ಜೀರ್ಣೋದ್ಧಾರದ ಹಿನ್ನೆಲೆಯನ್ನು ವಿವರಿಸಿದರು. ೧೯೭೭-೭೮ರಲ್ಲಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ, ಮುರುಡೇಶ್ವರ ಪೇಟೆಯ ಮಧ್ಯಭಾಗದಲ್ಲಿರುವ ಶ್ರೀ ಮಹಾಮುರುಡೇಶ್ವರ ದೇವರ ಪುಷ್ಕರಣಿಯ ಪಕ್ಕದಲ್ಲಿದ್ದ ಪುರಾತನ ಶ್ರೀ ದೇವರ ಓಲಗ ಮಂಟಪ ಜೀರ್ಣಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೀಮೆಯ ಭಕ್ತಾದಿಗಳು ಒಗ್ಗೂಡಿ ಓಲಗ ಮಂಟಪದ ನವೀಕರಣ ಕಾರ್ಯ ಕೈಗೊಂಡರು. ಗಣೇಶೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಓಲಗ ಮಂಟಪದ ನವೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿತ್ತು. ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಈಗಿರುವ ಓಲಗ ಮಂಟಪದ ಮುಂಭಾಗವನ್ನು ಶ್ರೀ ಕ್ಷೇತ್ರ ಮುರುಡೇಶ್ವರದ ವೈಭವ ಸಾರುವ ಕಲಾಕೃತಿಗಳೊಂದಿಗೆ ನವೀಕರಿಸುವ ಕುರಿತು ಪ್ರಸ್ತುತ ಆಡಳಿತ ಧರ್ಮದರ್ಶಿ ಸತೀಶ ಆರ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಈ ಕಾರ್ಯಕ್ಕೆ ಆಸಕ್ತಿ ತೋರಿಸಿ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಸುವರ್ಣ ಸಂಕಲ್ಪ ಸಂಚಯನಿಧಿ ಸ್ಥಾಪನೆ: 

ಸಮಿತಿಯ ಉಪಾಧ್ಯಕ್ಷ ಕೃಷ್ಣ ನಾಯ್ಕ ಜಮೀನ್ದಾರ್ ಮಾತನಾಡಿ, ೧೯೭೭ರಿಂದಲೂ ಗುಡಿಗಾರಗಲ್ಲಿಯಿಂದ ಚಿಕ್ಕ ಗಣಪತಿ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸುವ ಸಂಪ್ರದಾಯ ನಿರಂತರವಾಗಿ ಮುಂದುವರಿದಿದೆ ಎಂದರು. ಪ್ರಸ್ತುತ ಸಮಿತಿಯಲ್ಲಿ ಸುಮಾರು ೨ ಸಾವಿರ ಸದಸ್ಯರಿದ್ದಾರೆ. ಪ್ರತಿವರ್ಷ ಲೋಕಕಲ್ಯಾಣಾರ್ಥವಾಗಿ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. ಮುಂದಿನ ವರ್ಷಗಳಲ್ಲೂ ಈ ಸೇವಾ ಕಾರ್ಯಗಳನ್ನು ನಿರಂತರವಾಗಿ ಮುಂದುವರಿಸುವ ಉದ್ದೇಶದಿಂದ ಹಾಗೂ ಪ್ರತಿವರ್ಷ ಸಾರ್ವಜನಿಕ ದೇಣಿಗೆ ಸಂಗ್ರಹಿಸುವ ಅಗತ್ಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ೫೦ನೇ ವರ್ಷದ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ‘ಸುವರ್ಣ ಸಂಕಲ್ಪ ಸಂಚಯನಿಧಿ’ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು. ಈ ಬೃಹತ್ ಕಾರ್ಯಕ್ರಮಗಳಿಗಾಗಿ ೧ ಕೋಟಿಗೂ ಹೆಚ್ಚು ರೂಪಾಯಿ ದೇಣಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸಂಗ್ರಹವಾಗುವ ದೇಣಿಗೆಯ ಶೇ ೨೫ರಷ್ಟು ಮೊತ್ತವನ್ನು ಶ್ರೀ ದೇವರ ‘ಸುವರ್ಣ ಸಂಕಲ್ಪ ಸಂಚಯನಿಧಿ’ಗೆ ಸಮರ್ಪಿಸುವ ಮೂಲಕ ಮುಂದಿನ ದಿನಗಳಲ್ಲಿ ಧಾರ್ಮಿಕ ಹಾಗೂ ಸೇವಾ ಚಟುವಟಿಕೆಗಳಿಗೆ ಆರ್ಥಿಕ ಬಲ ಒದಗಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣಪತಿ ಮೂರ್ತಿ ತಯಾರಕ ದೇವಿದಾಸ ಗುಡಿಗಾರ, ಸಮಿತಿಯ ಪ್ರಮುಖರಾದ ಸಂತೋಷ ನಾಯ್ಕ, ಲಕ್ಷ್ಮಣ ನಾಯ್ಕ, ಶಂಭು ಹೆಗಡೆ, ಅಶೋಕ ಪೂಜಾರಿ, ನಾಗೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ; ಸೆ ೩೦ರ ಗಡುವಿನಿಂದ ಹೆಚ್ಚಿದ ಆತಂಕ

ಕೆಲಸಕ್ಕೆ ಸೇರಿದ ಎರಡೇ ದಿನಕ್ಕೆ ದುರಂತ; ಭಟ್ಕಳದಲ್ಲಿ ಕಾರು ಡಿಕ್ಕಿಗೆ ವ್ಯಕ್ತಿ ಸಾವು

ಭಟ್ಕಳದಲ್ಲಿ ಹೆಚ್ಚುತ್ತಿರುವ ಭಿಕ್ಷಾಟನೆ: ಭಿಕ್ಷೆಯ ಹಿಂದೆ ನಡೆಯುತ್ತಿರುವುದೇನು?