ಭಟ್ಕಳ: ಸಂಗೀತಪುರ ಹಾಡವಳ್ಳಿ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ೪೦ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ‘ನಿನಾದ ಭಾವ ಗಾನ ಯಾನ’ ಎಂಬ ಸುಮಧುರ ಸಂಗೀತ ಕಾರ್ಯಕ್ರಮ ನಡೆಯಿತು.

ಭಟ್ಕಳದ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರು ಭಕ್ತಿ ಗೀತೆ, ಭಾವಗೀತೆ, ದೇಶಭಕ್ತಿ ಗೀತೆ, ತತ್ವಪದ ಹಾಗೂ ಜನಪದ ಗೀತೆ ಸೇರಿದಂತೆ ವೈವಿಧ್ಯಮಯ ಗೀತೆಗಳನ್ನು ಪ್ರಸ್ತುತಪಡಿಸಿದರು.

ತಮ್ಮ ಗಾಯನದ ಮೂಲಕ ಉಮೇಶ ಮುಂಡಳ್ಳಿ ಅವರು ನೆರೆದಿದ್ದ ಸಂಗೀತ ಪ್ರಿಯರನ್ನು ರಂಜಿಸಿದರು. ಗಾಯನದಲ್ಲಿ ನಿನಾದ ಉಮೇಶ ಸಾಥ್ ನೀಡಿದರು. ಹಿರಿಯ ಕಲಾವಿದ ಉಮೇಶ ಮೇಸ್ತ, ಶಿರೂರು ಅವರು ರಿದಂ ಪ್ಯಾಡ್‌ನಲ್ಲಿ, ನವೀನ್ ಶೇಟ್ ಅವರು ಕೀಬೋರ್ಡ್‌ನಲ್ಲಿ ಹಾಗೂ ಶ್ಯಾಮ್ ಮೇಸ್ತ ಅವರು ತಬಲದಲ್ಲಿ ಸಹಕರಿಸಿದರು.

ನಿನಾದ ಕಲ್ಚರಲ್ ಅಕಾಡೆಮಿಯ ಕಲಾವಿದರ ಸುಮಧುರ ಸಂಗೀತ ಪ್ರಸ್ತುತಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ವೈವಿಧ್ಯಮಯ ಗೀತೆಗಳ ಮೂಲಕ ಭಕ್ತಿ, ಭಾವನೆ ಹಾಗೂ ದೇಶಪ್ರೇಮವನ್ನು ಮೂಡಿಸಿದ ‘ನಿನಾದ ಭಾವ ಗಾನ ಯಾನ’ ಕಾರ್ಯಕ್ರಮವು ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಇದನ್ನು ಓದಿ: 

ಮುರ್ಡೇಶ್ವರ: ಸ್ಕೂಟರ್‌ಗಳ ಮುಖಾಮುಖಿ ಡಿಕ್ಕಿ, ಮಹಿಳೆಗೆ ಗಾಯ

ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದೂರು-ಪ್ರತಿ ದೂರು ದಾಖಲು