ಭಟ್ಕಳ ಡೈರಿ ವರದಿ
ಭಟ್ಕಳ: ಬೋಲೆರೋ ವಾಹನಕ್ಕೆ ಸ್ಕೂಟಿ ತಾಗಿ ನಂಬರ್ ಪ್ಲೇಟ್ ಹಾನಿಯಾದ ಬಳಿಕ ಸ್ಕೂಟಿ ಸವಾರನೊಬ್ಬ ವಾಹನದ ಕೀ ಹಾಗೂ ಚಾಲಕನ ಜೇಬಿನಲ್ಲಿದ್ದ ₹೧೫ ಸಾವಿರ ನಗದು ಕಸಿದುಕೊಂಡು ಪರಾರಿಯಾಗಿರುವ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳ್ನಿ, ಮಾವಿನಕುರ್ವೆಯ ಗಣೇಶ ತಿಮ್ಮಪ್ಪ ಖಾರ್ವಿ (೨೩) ಅವರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸೆಪ್ಟೆಂಬರ್ ೨೧ರಂದು ರಾತ್ರಿ ನಡೆದಿದೆ ಎಂದು ತಿಳಿಸಿದ್ದಾರೆ.
ದೂರು ಪ್ರಕಾರ, ಗಣೇಶ ಅವರು ಕೆಎ-೨೧/ಬಿ-೯೮೬೬ ಸಂಖ್ಯೆಯ ಬೋಲೆರೋ ವಾಹನದಲ್ಲಿ ಮಾವಿನಕುರ್ವೆ ಬಂದರಿನಿಂದ ಮೀನು ಲೋಡ್ ಮಾಡಿಕೊಂಡು ಮಲ್ಪೆಗೆ ತೆರಳುತ್ತಿದ್ದರು. ರಾತ್ರಿ ಸುಮಾರು ೭.೨೦ಕ್ಕೆ ಭಟ್ಕಳ ಬಂದರಿನಿಂದ ಹೊರಟ ಅವರು ೭.೩೦ರ ಸುಮಾರಿಗೆ ಬೆಳ್ನಿ ಕನ್ನಡ ಶಾಲೆ ಸಮೀಪ ತಲುಪಿದ್ದರು. ಈ ವೇಳೆ ಕೆಎ-೨೦/೬೪೯೫ ಸಂಖ್ಯೆಯ ಬಿಳಿ ಬಣ್ಣದ ಸ್ಕೂಟಿಯನ್ನು ಅದರ ಸವಾರ ಬಂದರಿನ ಕಡೆಯಿಂದ ಭಟ್ಕಳ ಪಟ್ಟಣದ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಸವಾರ ಮೊಬೈಲ್ನಲ್ಲಿ ಮಾತನಾಡುತ್ತಾ ಸ್ಕೂಟಿ ಚಲಾಯಿಸುತ್ತಿದ್ದುದನ್ನು ಗಮನಿಸಿದ ಗಣೇಶ ಅವರು ಎರಡು ಬಾರಿ ಹಾರ್ನ್ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆ ಬಳಿಕ ಸ್ಕೂಟಿ ಸವಾರ ಏಕಾಏಕಿ ರಸ್ತೆಯ ಮಧ್ಯದಲ್ಲಿ ಸ್ಕೂಟಿಯನ್ನು ನಿಲ್ಲಿಸಿದ್ದಾನೆ. ಬೋಲೆರೋ ವಾಹನವನ್ನು ಬ್ರೇಕ್ ಹಾಕಿ ನಿಲ್ಲಿಸಲು ಪ್ರಯತ್ನಿಸಿದರೂ ನಿಯಂತ್ರಣಕ್ಕೆ ಬಾರದೆ ಸ್ಕೂಟಿಯ ಹಿಂಭಾಗಕ್ಕೆ ಸಣ್ಣ ಪ್ರಮಾಣದಲ್ಲಿ ತಾಗಿ ನಂಬರ್ ಪ್ಲೇಟ್ ಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ಬಳಿಕ ಸ್ಕೂಟಿ ಸವಾರ ಗಣೇಶ ಅವರ ಬಳಿ ಬಂದು ಹಾರ್ನ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. ಸ್ಕೂಟಿಗೆ ಆಗಿರುವ ಹಾನಿಯನ್ನು ತಮ್ಮ ಸಾಹುಕಾರರಿಗೆ ತಿಳಿಸಿ ರಿಪೇರಿ ಮಾಡಿಸಿಕೊಡುವುದಾಗಿ ಗಣೇಶ ಹೇಳುತ್ತಿದ್ದಾಗ, ಸವಾರ ಬೋಲೆರೋ ವಾಹನದ ಕೀ ಹಾಗೂ ಅಂಗಿಯ ಮೇಲಿನ ಜೇಬಿನಲ್ಲಿದ್ದ ₹೧೫ ಸಾವಿರ ಹಣವನ್ನು ತೆಗೆದುಕೊಂಡು ಸ್ಕೂಟಿಯಲ್ಲಿ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಂತರ ಮತ್ತೆ ಸ್ಥಳಕ್ಕೆ ಬಂದ ಸ್ಕೂಟಿ ಸವಾರ, ಜನರು ಸೇರುವುದನ್ನು ಕಂಡು ಸ್ಕೂಟಿಯಲ್ಲಿ ಭಟ್ಕಳದ ಕಡೆಗೆ ವೇಗವಾಗಿ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಎ-೨೦/೬೪೯೫ ಸಂಖ್ಯೆಯ ಬಿಳಿ ಬಣ್ಣದ ಸ್ಕೂಟಿ ಸವಾರನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿದಾರರು ಮನವಿ ಮಾಡಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ಅಕ್ರಮ ಮದ್ಯ ಮಾರಾಟ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಎರಡು ಪ್ರಕರಣ ದಾಖಲು
ಭಟ್ಕಳದಲ್ಲಿ ಓಸಿ-ಮಟಕಾ ಜುಗಾರಾಟ: ಐವರ ವಿರುದ್ಧ ಪ್ರಕರಣ ದಾಖಲು
ಭಟ್ಕಳದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಆರೋಪ: ₹೭೫ ಲಕ್ಷ ಅಡಮಾನ ಸಾಲ ಪಡೆದಿರುವ ಬಗ್ಗೆ ದೂರು

