ಭಟ್ಕಳ ಡೈರಿ ವರದಿ
ಭಟ್ಕಳ: ಕುಟುಂಬದ ಮೃತ ಸದಸ್ಯರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ಗಳು ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿ, ಕುಟುಂಬದ ಸ್ಥಿರಾಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ಭಟ್ಕಳದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ೧೪ರಂದು ಸಂಜೆ ೭ ಗಂಟೆಗೆ ದೂರು ಸ್ವೀಕರಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ೧೨ ಮಂದಿ ಹಾಗೂ ಇತರ ೬ ಮಂದಿ ಅಪರಿಚಿತರ ವಿರುದ್ಧ ಆರೋಪ ಮಾಡಲಾಗಿದೆ.
ನಕಲಿ ದಾಖಲೆಗಳ ಮೂಲಕ ಆಸ್ತಿ ವರ್ಗಾವಣೆ ಆರೋಪ: ಭಟ್ಕಳ ತಾಲೂಕಿನ ಮಾವಳ್ಳಿ-೧ ಗ್ರಾಮದ ಸರ್ವೇ ನಂಬರ್ ೬೦೨, ಹಿಸ್ಸಾ ನಂಬರ್ ೧ರಲ್ಲಿ ೦-೧೩-೦೦ ಗುಂಟೆ ವಿಸ್ತೀರ್ಣದ ಕುಟುಂಬದ ಸ್ಥಿರಾಸ್ತಿಯನ್ನು ನಕಲಿ ದಾಖಲೆಗಳ ಆಧಾರದಲ್ಲಿ ಮೊದಲು ದೇವಶಿಸ್ ಎಂ ಬಿನ್ ಸಂಜೀವನ ಪಿ ಎ ಎಂಬವರ ಹೆಸರಿಗೆ ಹಾಗೂ ನಂತರ ಹೆಲೆನ್ ಫ್ರಾನ್ಸಿಸ್ ಗೋಮ್ಸ್ ಅವರ ಹೆಸರಿಗೆ ಕ್ರಯದಸ್ತಾವೇಜು ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಕುಟುಂಬದ ಈಗಾಗಲೇ ಮೃತಪಟ್ಟಿರುವ ಸದಸ್ಯರು ಜೀವಂತವಿರುವಂತೆ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿ ಮಾರಾಟದ ನೋಂದಣಿ ಸಂದರ್ಭದಲ್ಲಿ ಕುಟುಂಬದ ಸದಸ್ಯರಂತೆ ಬಿಂಬಿಸಿಕೊಂಡು ಕೆಲವರು ಸಹಿ ಹಾಕಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
₹೭೫ ಲಕ್ಷ ಅಡಮಾನ ಸಾಲ ಪಡೆದಿರುವ ಆರೋಪ:
ಅಕ್ರಮವಾಗಿ ಸೃಷ್ಟಿಸಲಾದ ದಾಖಲೆಗಳನ್ನು ಬಳಸಿಕೊಂಡು ಹೊನ್ನಾವರದ ಕೆನರಾ ಮೈನಾರಿಟಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಬಣಸಾಲೆ, ಮಂಕಿ ಶಾಖೆಯಿಂದ ಒಟ್ಟು ₹೭೫ ಲಕ್ಷ ಅಡಮಾನ ಸಾಲ ಪಡೆಯಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬಕ್ಕೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ಅವರು, ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ತನಿಖೆಗೆ ಮನವಿ: ಪ್ರಕರಣದಲ್ಲಿ ದೇವಶಿಸ್ ಎಂ ಸಂಜೀವನ, ಹೆಲೆನ್ ಫ್ರಾನ್ಸಿಸ್ ಗೋಮ್ಸ್ ಸೇರಿದಂತೆ ಒಟ್ಟು ೧೨ ಮಂದಿ ಹಾಗೂ ಇತರ ೬ ಮಂದಿ ಅಪರಿಚಿತರ ವಿರುದ್ಧ ಆರೋಪ ಮಾಡಲಾಗಿದೆ. ಆರೋಪಿಗಳಲ್ಲಿ ಭಟ್ಕಳ, ಮುರುಡೇಶ್ವರ, ಹೊನ್ನಾವರ ಹಾಗೂ ಕೇರಳದ ನಿವಾಸಿಗಳ ಹೆಸರುಗಳು ದಾಖಲಾಗಿವೆ.
ದೂರು ತಡವಾಗಿ ನೀಡಿರುವುದಕ್ಕೆ, ಆಸ್ತಿಯ ಹಕ್ಕುದಾರರಾಗಿರುವ ಐದು ಸಂಬಂಧಿಕ ಕುಟುಂಬಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡ ಬಳಿಕ ದೂರು ನೀಡಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಬೇಕಿದ್ದು, ಆರೋಪಗಳು ತನಿಖೆಯಿಂದ ದೃಢಪಟ್ಟ ಬಳಿಕವೇ ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ :
ಅಪರಾಧ ತಡೆಗೆ ಕ್ರಿಯೇಟಿವ್ ಫ್ರೆಂಡ್ಸ್ ಸಮಾಜಮುಖಿ ಹೆಜ್ಜೆ
ಭಟ್ಕಳದಲ್ಲಿ ಜಲ ಸಂವರ್ಧನೆಗೆ ಶ್ರಮದಾನ: ಮುಂಚಿತವಾಗಿಯೇ ನದಿ ಕಟ್ಟು ನಿರ್ಮಾಣ
ಸಂಪಾದಕೀಯ: ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ
ಭಟ್ಕಳದಲ್ಲಿ ಕಳೆದೊಂದು ವಾರ: ಕಲ್ಲು ತೂರಾಟದಿಂದ ಪೊಲೀಸ್ ಬಂದೋಬಸ್ತ್ವರೆಗೆ ಏನಾಯಿತು?

