ಭಟ್ಕಳ ಡೈರಿ ವರದಿ

ಬೆಂಗಳೂರು: ದಸರಾ ಹಾಗೂ ನವರಾತ್ರಿ ಹಬ್ಬದ ಪ್ರಯಾಣದ ಭರಾಟೆಯ ನಡುವೆಯೇ ಬೆಂಗಳೂರು–ಮಂಗಳೂರು ಹಾಗೂ ಬೆಂಗಳೂರು–ಕಾರವಾರ ಮಾರ್ಗದ ಹಗಲು ರೈಲು ಸೇವೆಗಳನ್ನು ೨೬ ಸುತ್ತುಗಳ ಕಾಲ ರದ್ದುಗೊಳಿಸಲಾಗಿದೆ. ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ಹಳಿ ನಿರ್ವಹಣೆ ಹಾಗೂ ಎಂಜಿನಿಯರಿಂಗ್ ಕಾಮಗಾರಿಗಾಗಿ ಅಕ್ಟೋಬರ್ ೪ರಿಂದ ನವೆಂಬರ್ ೪ರವರೆಗೆ ಲೈನ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ದಸರಾ ವಾರದ ಪ್ರಯಾಣಕ್ಕೆ ಹೊಡೆತ:

ಅಕ್ಟೋಬರ್ ೧೬ರಿಂದ ೨೦ರವರೆಗೆ ದಸರಾ ಅವಧಿಯಲ್ಲಿ ಮಾತ್ರ ಈ ರೈಲು ಸೇವೆಗಳಲ್ಲಿ ಕೆಲವು ಸಂಚಾರ ನಡೆಸಲಿವೆ. ಉಳಿದ ದಿನಗಳಲ್ಲಿ ಸೇವೆ ಸ್ಥಗಿತಗೊಳ್ಳುವುದರಿಂದ ದಸರಾ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡಿರುವ ಪ್ರಯಾಣಿಕರಿಗೆ ತೊಂದರೆಯಾಗಲಿದೆ.

ದಕ್ಷಿಣ ಕರ್ನಾಟಕದಲ್ಲಿ ಅಕ್ಟೋಬರ್ ತಿಂಗಳು ಪ್ರವಾಸ ಮತ್ತು ಹಬ್ಬದ ಪ್ರಯಾಣದ ಪ್ರಮುಖ ಅವಧಿಯಾಗಿದೆ. ನವರಾತ್ರಿ, ಮಂಗಳೂರು ದಸರಾ ಸೇರಿದಂತೆ ಕರಾವಳಿಯ ವಿವಿಧ ಉತ್ಸವಗಳಲ್ಲಿ ಪಾಲ್ಗೊಳ್ಳಲು ಸಾವಿರಾರು ಮಂದಿ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಕರಾವಳಿಗೆ ಆಗಮಿಸುತ್ತಾರೆ. ಇದೇ ಅವಧಿಯಲ್ಲಿ ಮೈಸೂರು ದಸರಾಕ್ಕೂ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಾರೆ.

ಕಾಮಗಾರಿ ಸಮಯದ ಬಗ್ಗೆ ಪ್ರಶ್ನೆ:

೨೦೨೫ರ ಜೂನ್‌ನಿಂದ ಡಿಸೆಂಬರ್‌ವರೆಗೆ ವಿದ್ಯುದ್ದೀಕರಣ ಕಾಮಗಾರಿಗಾಗಿ ದೀರ್ಘಕಾಲ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ಪ್ರಯಾಣದ ಪೀಕ್ ಸೀಸನ್‌ನಲ್ಲೇ ಕಾಮಗಾರಿ ಕೈಗೊಳ್ಳುತ್ತಿರುವುದು ಏಕೆ ಎಂಬುದು ಪ್ರಯಾಣಿಕರ ಪ್ರಶ್ನೆಯಾಗಿದೆ. ವಾರಾಂತ್ಯವನ್ನು ಹೊರತುಪಡಿಸಿ ಮಧ್ಯ ವಾರಗಳಲ್ಲಿ ಅಥವಾ ಕಡಿಮೆ ಪ್ರಯಾಣದ ಅವಧಿಯಲ್ಲಿ ಕಾಮಗಾರಿ ಕೈಗೊಳ್ಳಬಹುದಿತ್ತು ಎಂದು ಪ್ರಯಾಣಿಕ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ರೈಲ್ವೆಯ ಸ್ಪಷ್ಟನೆ: ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಅವರ ಪ್ರಕಾರ, ಯಡಕುಮರಿ–ಸಿರಿಬಾಗಿಲು ನಡುವಿನ ಬ್ಯಾಲಸ್ಟ್ ಟ್ಯಾಂಪಿಂಗ್ ಕಾಮಗಾರಿ ಬಹಳ ದಿನಗಳಿಂದ ಬಾಕಿ ಉಳಿದಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಭೂಕುಸಿತವೂ ಸಂಭವಿಸಿರುವ ಹಿನ್ನೆಲೆಯಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ರೈಲುಗಳು ರದ್ದು?:

ಯಶವಂತಪುರ → ಕಾರವಾರ — ರೈಲು ಸಂಖ್ಯೆ ೧೬೫೧೫ ಅಕ್ಟೋಬರ್ ೫, ೭, ೯, ೧೨, ೧೪, ೨೧, ೨೩, ೨೬, ೨೮, ೩೦ ಮತ್ತು ನವೆಂಬರ್ ೨ರಂದು ಒಟ್ಟು ೧೧ ದಿನ ರದ್ದಾಗಿದೆ. ಕಾರವಾರ → ಯಶವಂತಪುರ — ರೈಲು ಸಂಖ್ಯೆ ೧೬೫೧೬ ಹಿಂತಿರುಗುವ ರೈಲು ಅಕ್ಟೋಬರ್ ೬, ೮, ೧೦, ೧೩, ೧೫, ೨೨, ೨೪, ೨೭, ೨೯, ೩೧ ಮತ್ತು ನವೆಂಬರ್ ೩ ಒಟ್ಟು ೧೧ ದಿನ ಸಂಚಾರ ಇರುವುದಿಲ್ಲ. ಇದರಿಂದ ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಭಾಗದ ಪ್ರಯಾಣಿಕರು ದಸರಾ ಸಂದರ್ಭದಲ್ಲಿ ರೈಲು ಕಾಯ್ದಿರಿಸುವ ಮೊದಲು ದಿನಾಂಕ ಪರಿಶೀಲಿಸುವುದು ಸೂಕ್ತ.

೧೬೫೭೫ ಯಶವಂತಪುರ–ಮಂಗಳೂರು ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ ೪, ೬, ೮, ೧೧, ೧೩, ೧೫, ೨೨, ೨೫, ೨೭, ೨೯ ಹಾಗೂ ನವೆಂಬರ್ ೧ ಮತ್ತು ೩ರಂದು ರದ್ದುಗೊಳ್ಳಲಿದೆ. ವಾಪಸ್ ಸಂಚರಿಸುವ ೧೬೫೭೬ ಮಂಗಳೂರು–ಯಶವಂತಪುರ ಗೋಮಟೇಶ್ವರ ಎಕ್ಸ್‌ಪ್ರೆಸ್ ಅಕ್ಟೋಬರ್ ೫, ೭, ೯, ೧೨, ೧೪, ೧೬, ೨೩, ೨೬, ೨೮, ೩೦ ಹಾಗೂ ನವೆಂಬರ್ ೨ ಮತ್ತು ೪ರಂದು ರದ್ದಾಗಲಿದೆ.

ಕಾಮಗಾರಿ ಅಗತ್ಯವಾದರೂ, ಹಬ್ಬದ ಪೀಕ್ ಸೀಸನ್‌ನಲ್ಲಿ ರೈಲು ಸೇವೆ ರದ್ದುಗೊಳಿಸಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಮಗಾರಿಯನ್ನು ಪರ್ಯಾಯ ರೀತಿಯಲ್ಲಿ ನಿರ್ವಹಿಸಿ ಪ್ರಮುಖ ದಿನಗಳಲ್ಲಿ ರೈಲು ಸೇವೆ ಮುಂದುವರಿಸಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ಇದನ್ನೂ ಓದಿ:

ಕಳೆದೊಂದು ವಾರದ ಭಟ್ಕಳ: ಪೊಲೀಸ್ ಪ್ರಕರಣಗಳಿಂದ ಕ್ರೀಡಾ ಸಾಧನೆವರೆಗೆ ಏನಾಯಿತು?

ಭಟ್ಕಳಕ್ಕೆ ಬೇಕು ಉಪ ಬಂಧಿಖಾನೆ: ಮುನ್ನೆಲೆಗೆ ಬಂದ ಜನಾಗ್ರಹ