ಭಟ್ಕಳ ಡೈರಿ ವರದಿ
ಮುರ್ಡೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದ ಮೇರೆಗೆ ಇಬ್ಬರ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ ಅಕ್ಟೋಬರ್ ೩ರಂದು ಮಧ್ಯಾಹ್ನ ಸುಮಾರು ೩.೩೫ರ ವೇಳೆಗೆ ಮಾವಿನಕಟ್ಟಾದ ಕುಬೇರ ಲಾಡ್ಜ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಪಾನಶಾಪ್ ಅಂಗಡಿಯ ಸುಬ್ರಮಣ್ಯ ತಂದೆ ರಾಮಾ ದೇವಾಡಿಗ (೩೦) ಓಸಿ ಮಟ್ಕಾ ಜೂಜಾಟ ಆಡಿಸುತ್ತಿದ್ದರೆಂದು ಆರೋಪಿಸಲಾಗಿದೆ. ಮಟ್ಕಾ ಅಂಕೆ ಸಂಖ್ಯೆಗಳ ಮೇಲೆ ಜನರಿಂದ ಹಣವನ್ನು ಪಂಥವಾಗಿ ಕಟ್ಟಿಸಿಕೊಂಡು, ಒಂದು ರೂಪಾಯಿಗೆ ೮೦ ರೂಪಾಯಿ ನೀಡುವುದಾಗಿ ಹೇಳಿ ಜೂಜಾಟ ನಡೆಸಲಾಗುತ್ತಿತ್ತು ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಾಳಿಯ ವೇಳೆ ಆರೋಪಿತನಿಂದ ರೂ. ೨,೦೨೦ ನಗದು ಹಣ ಪತ್ತೆಯಾಗಿದೆ. ಈ ಹಣವನ್ನು ಬುಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿರಾಲಿ ಅಳ್ವೆಕೋಡಿಯ ಚಾಲಕ ದೇವೇಂದ್ರ ಮಂಜುನಾಥ ಮೊಗೇರ (೩೦) ಎಂಬಾತನಿಗೆ ನೀಡುವುದಾಗಿ ಸುಬ್ರಮಣ್ಯ ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮುರ್ಡೇಶ್ವರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಹಾಗೂ ತನಿಖಾಧಿಕಾರಿ ಲೋಕನಾಥ ರಾಠೋಡ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಎನ್.ಸಿ. ಪ್ರಕರಣ ದಾಖಲಿಸಲಾಗಿದ್ದು, ಪ್ರಥಮ ವರದಿ ದಾಖಲಿಸಿ ತನಿಖೆ ಮುಂದುವರಿಸಲು ನ್ಯಾಯಾಲಯದ ಅನುಮತಿ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :
ದಸರಾ ಋತುವಿನಲ್ಲೇ ಬೆಂಗಳೂರು–ಕಾರವಾರ ಹಗಲು ರೈಲು ಸೇವೆ ರದ್ದು
ಕಳೆದೊಂದು ವಾರದ ಭಟ್ಕಳ: ಪೊಲೀಸ್ ಪ್ರಕರಣಗಳಿಂದ ಕ್ರೀಡಾ ಸಾಧನೆವರೆಗೆ ಏನಾಯಿತು?




