ಸಾಗರ : ಸರ್ಕಾರ 57 ಸಾವಿರ ಕೋಟಿಯನ್ನು ಬಡವರ ಮಡಿಲಿಗೆ ಹಾಕಿದೆ. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡಿ, ಪುನಃ ಸರ್ಕಾರಕ್ಕೆ ಅನುಕೂಲವಾಗುವಂತೆ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸಚಿವ ವೈದ್ಯ ಅಸಮಾಧಾನ
ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು(ಮಾ.೧೩) ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ವಿಡಿಯೋ ನೋಡಿ : ಮಕ್ಕಳಿಂದ ಪಾಲಕರ ಪಾದಪೂಜೆ https://fb.watch/qNlOFUksP1/?mibextid=Nif5oz
ಸರ್ಕಾರ ರಚನೆ ಆಗುವ ಪೂರ್ವದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ. ಇನ್ನು ಮುಂದೆ ಅಭಿವೃದ್ದಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಇದೀಗ ತಾನೆ ಸೊರಬ ತಾಲ್ಲೂಕಿನ ಭೈರೇಕೊಪ್ಪದಲ್ಲಿ ರೂ. 18 ಕೋಟಿ ಮೊತ್ತದ ನಾರಾಯಣ ಗುರು ವಸತಿ ಶಾಲೆಗೆ ಗುದ್ದಲಿಪೂಜೆ ನೆರವೇರಿಸಿ ಬಂದಿದ್ದೇನೆ. ಸಾಗರ ತಾಲ್ಲೂಕಿನ ಗೆಣಸಿನಕುಣಿಯಲ್ಲಿ ರೂ.18 ಕೋಟಿ ಅಂದಾಜು ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಲಾಗುವುದು. ನನ್ನ ಶಿಕ್ಷಣ ಇಲಾಖೆಗೆ ಸರ್ಕಾರ 44,500 ಕೋಟಿ ಅನುದಾನ ಒದಗಿಸಿದೆ ಎಂದರು.
ಬಂಗಾರಪ್ಪನವರು ಮುಖ್ಯಮಂತ್ರಿಯಾದಾಗ ರೈತರಿಗೆ 10 ಹೆಚ್ ಪಿ ವಿದ್ಯುತ್ನ್ನು ಉಚಿತವಾಗಿ ನೀಡಿದ್ದರು. ಕಾಗೋಡು ತಿಮ್ಮಪ್ಪನಂತಹವರು ರೈತರ ಬಗರ್ ಹುಕುಂ ಭೂಮಿಗಾಗಿ ಸಾಕಷ್ಟು ಹೋರಾಟ ಮಾಡಿದರು. ರೈತರ, ಜನರ ಪರವಾಗಿ ನಿಂತರು. ಕಾಗೋಡು ತಿಮ್ಮಪ್ಪನವರ ಕನಸನ್ನು ನನಸು ಮಾಡುತ್ತೇವೆ, ಹಿರಿಯರ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರು, ಬಗರ್ ಹುಕುಂ ಸೇರಿದಂತೆ ಹಲವಾರು ಸಮಸ್ಯೆಗಳು ಇವೆ. ಅದಕ್ಕಾಗಿ ನಾವು ಹೋರಾಡುತ್ತೇವೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹಲವಾರು ಸಭೆಗಳನ್ನು ನಡೆಸಿದ್ದೇವೆ. ರಾಜ್ಯ ಸರ್ಕಾರ ತನ್ನ ಎಲ್ಲ ಪ್ರಯತ್ನವನ್ನು ಮಾಡುತ್ತಲಿದೆ. ಆದರೆ ಕೇಂದ್ರ ಸರ್ಕಾರ ಸಹಕರಿಸದಿದ್ದರೆ ಕಷ್ಟವಾಗುತ್ತದೆ. ಆದರೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಯಾವ ರೈತರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಅಧಿಕಾರಿಗಳು ಸಹ ರೈತರು, ಜನರೊಂದಿಗೆ ಸಹಕರಿಸುವಂತೆ ಸೂಚಿಸಿದ್ದೇವೆ ಎಂದರು.
ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ಕ್ಷೇತ್ರ ಬೆಳೆಯುತ್ತಿದ್ದು, ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಈ ಆಡಳಿತ ಸೌಧ ಮಂಜೂರಾತಿ ಪಡೆದ ನಂತರ ಮೂರು ವರ್ಷಗಳ ಕಾಲ ಕಾಮಗಾರಿ ತಡೆಹಿಡಿಯಲಾಗಿತ್ತು. ನಂತರ ಹಂತ ಹಂತವಾಗಿ ರೂ.965 ಲಕ್ಷ ಅನುದಾನದಲ್ಲಿ ಆಡಳಿತ ಸೌಧವನ್ನು ನಿರ್ಮಿಸಲಾಗಿದೆ. ಆದಷ್ಟು ಎಲ್ಲ ಇಲಾಖೆಗಳು ಇಲ್ಲಿ ಕಾರ್ಯ ನಿರ್ವಹಿಸಲಿವೆ. ಜನರ ಕಷ್ಟಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಸಾಗರದ ಎಲ್ಲ ವಾರ್ಡುಗಳಿಗೆ ತಲಾ ಅಂದಾಜು 1 ಕೋಟಿ ಅನುದಾನ ನೀಡಿದ್ದೇವೆ. ರೂ.4.80 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಲಾಗುವುದು. ನಗರದ ಮೂರು ಕಡೆ ಫುಡ್ಕೋರ್ಟ್ಗಳನ್ನು ಸ್ಥಾಪಿಸಲಾಗುವುದು. ಜನರಲ್ ಆಸ್ಪತ್ರೆಗೆ ರೂ.1.45 ಕೋಟಿ ಬಿಡುಗಡೆಯಾಗಿದ್ದು, 14 ಡಯಾಲಿಸಿಸ್ ಮಷೀನ್ ಮತ್ತು ಫಿಸಿಯೋಥೆರಪಿ ಕೂಡ ಆರಂಭವಾಗಲಿದೆ. ನಗರದಲ್ಲಿ ಪಾರ್ಕುಗಳನ್ನು ನಿರ್ಮಿಸಲಾಗುವುದು. ಮೀನು ಮಾರುಕಟ್ಟೆಗೆ ರೂ.1.35 ಕೋಟಿ ಮಂಜೂರಾಗಿದೆ. ರೂ.317 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಪೈಪ್ಲೈನ್ ಕೆಲಸ ನಡೆಯುತ್ತಿದೆ. ಯುಜಿಡಿ ಕಾಮಗಾರಿಗಳಿಗೆ ರೂ.47 ಕೋಟಿ ಮಂಜೂರಾಗಿದೆ ಎಂದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಕಾಗೋಡು ತಿಮ್ಮಪ್ಪನವರು ಆರಂಭಿಸಿದ ಕಟ್ಟಡವನ್ನು ಅವರ ಹಸ್ತದಿಂದಲೇ ಇಂದು ಲೋಕಾರ್ಪಣೆ ಗೊಳಿಸಿರುವುದು ಸಂತಸದ ವಿಷಯ ಎಂದರು.
ಪಿಡಬ್ಲ್ಯುಡಿ ಎಇಇ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ, ವಿಧಾನಸಭಾ ಮಾಜಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಸಾಗರ ಎಸಿ ಯತೀಶ್ ಆರ್. ಸಂವಿಧಾನ ಪೀಠಿಕೆಯನ್ನು ಬೋಧಿಸಿದರು. ಸಾಗರ ನಗರಸಭಾಧ್ಯಕ್ಷ ತುಕಾರಾಮ, ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಾಪಂ ಇಓ ನಾಗೇಶ್ ಬ್ಯಾಲಾಳ್, ಸಾಗರ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಇತರೆ ಅಧಿಕಾರಿಗಳು ಹಾಜರಿದ್ದರು.