ಭಟ್ಕಳ ಡೈರಿ ವರದಿ

ಭಟ್ಕಳ: ಜಾಗದ ವಿಚಾರವಾಗಿ ಪಕ್ಕದ ಮನೆಯವರ ನಡುವೆ ನಡೆಯುತ್ತಿದ್ದ ವಿವಾದ ವಿಕೋಪಕ್ಕೆ ತಿರುಗಿದ್ದು, ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ, ಕುಟುಂಬದ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಬೈಲೂರು ನಿವಾಸಿ ನಾರಾಯಣ ದುರ್ಗಪ್ಪ ಮೋಗೇರ (೭೨) ಅವರು ದೂರು ನೀಡಿದ ವೃದ್ಧರಾಗಿದ್ದಾರೆ. ಅದೇ ಪ್ರದೇಶದ ಗಣೇಶ ಶಿವಪ್ಪ ಹರಿಕಂತ್ರ ಮತ್ತು ಶಿವಪ್ಪ ಗಣಪು ಹರಿಕಂತ್ರ ಎಂಬುವವರ ವಿರುದ್ಧ ಆರೋಪ ಮಾಡಲಾಗಿದೆ.

ದೂರಿನ ಪ್ರಕಾರ, ಜಾಗದ ವಿಚಾರವಾಗಿ ಆರೋಪಿಗಳು ಮೊದಲಿನಿಂದಲೂ ತಕರಾರು ಮಾಡುತ್ತಿದ್ದರು. ಅಕ್ಟೋಬರ್ ೨೪ರಂದು ರಾತ್ರಿ ಸುಮಾರು ೮.೫೦ರ ವೇಳೆಗೆ ಇಬ್ಬರೂ ನಾರಾಯಣ ಮೋಗೇರ ಅವರ ಮನೆಗೆ ಬಂದು ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ನಾರಾಯಣ ಮೋಗೇರ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಡೆದು ದೂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅವರ ಸೊಸೆಯಂದಿರು ಮತ್ತು ಪತ್ನಿಯನ್ನೂ ನಿಂದಿಸಲಾಗಿದ್ದು, ಮೊಮ್ಮಗ ಭಗತ್‌ಸಿಂಗ್ ಮೋಗೇರ ಅವರನ್ನೂ ದೂಡಿದ ಪರಿಣಾಮ ಗಾಯವಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಆರೋಪಿಗಳು ಮನೆ ಬಿಟ್ಟು ತೆರಳುವಾಗ ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಾರಾಯಣ ಮೋಗೇರ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಇದನ್ನೂ ಓದಿ :

ಭಟ್ಕಳದ ಸಮುದ್ರ ಕಣ್ಣೀರಾಗುತ್ತಿದೆ: ಮೀನುಗಾರರ ಬದುಕಿಗೆ ಸುರಕ್ಷತೆ ಯಾವಾಗ?

ಭಟ್ಕಳದ ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಐದು ವರ್ಷಗಳ ಸಂಶೋಧನೆಗೆ ಮನ್ನಣೆ