ಭಟ್ಕಳ ಡೈರಿ ವರದಿ
ಭಟ್ಕಳ: ಶಾಲಾ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ಆತ್ಮರಕ್ಷಣಾ ಕೌಶಲ ಮತ್ತು ಶಿಸ್ತು ಬೆಳೆಸುವ ಉದ್ದೇಶದಿಂದ ಭಟ್ಕಳದ ವಿದ್ಯಾಭಾರತಿ ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ನಡೆಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ೧೫೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.
ಜಿಲ್ಲಾಡಳಿತ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಆಡಳಿತ ಕಚೇರಿ, ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (ರಿ.) ಸಂಯುಕ್ತ ಆಶ್ರಯದಲ್ಲಿ ೧೪ ಮತ್ತು ೧೭ ವರ್ಷದೊಳಗಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ತೂಕದ ವಿಭಾಗದ ನಿಯಮದಂತೆ ಸ್ಪರ್ಧೆ: ಕರಾಟೆ ಸ್ಪರ್ಧೆಯಲ್ಲಿ ನಿಗದಿತ ನಿಯಮಗಳ ಪ್ರಕಾರ ವಿದ್ಯಾರ್ಥಿಗಳನ್ನು ತೂಕದ ವಿಭಾಗಗಳಲ್ಲಿ ವಿಂಗಡಿಸಲಾಗಿತ್ತು. ಭಟ್ಕಳ ಮತ್ತು ಅಂಕೋಲಾ ತಾಲೂಕಿನ ಕೆಲವು ವಿದ್ಯಾರ್ಥಿಗಳಿಗೆ ನಿಗದಿತ ವಿಭಾಗದ ತೂಕದ ಮಿತಿಯಲ್ಲಿ ವ್ಯತ್ಯಾಸ ಕಂಡುಬಂದ ಕಾರಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆಯಲಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕರಾಟೆ ಶಿಕ್ಷಕರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಂಕಟೇಶ ನಾಯಕ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅರವಿಂದ ನಾಯ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಟಿ. ಗೌಡ, ಪ್ರಾಥಮಿಕ ದೈಹಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ವಿದ್ಯಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪಾ ಖಾರ್ವಿ ಹಾಗೂ ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಈಶ್ವರ ನಾಯ್ಕ, ಕಾನೂನು ಸಲಹೆಗಾರ ಮನೋಜ್ ನಾಯ್ಕ, ಸಮಾಜ ಸೇವಕ ಸುಧಾಕರ ನಾಯ್ಕ, ನಾಗಶ್ರೀ ನಾಯ್ಕ, ಚಂದ್ರ ನಾಯ್ಕ, ಪ್ರದೀಪ ಬಾಂದೇಕರ, ಸುನೀಲ ಐಗಳ, ಎಸ್.ಪಿ. ಹಂದೇ, ಅಶೋಕ ನಾಯ್ಕ, ಸುರೇಶ ನಾಯ್ಕ, ವೆಂಕಟೇಶ ಮೊಗೇರ, ರಾಜಶೇಖರ ಗೌಡ, ಪ್ರವೀಣ, ಪ್ರಭಾಕರ ಗೌಡ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ನ ನಿರ್ಣಾಯಕರಾದ ರಾಜಶೇಖರ ಗೌಡ ಮತ್ತು ಪ್ರವೀಣ್ ಅವರ ನೇತೃತ್ವದಲ್ಲಿ ಸ್ಪರ್ಧೆ ನಡೆಸಲಾಯಿತು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳದ ಆಸರಕೇರಿಯಲ್ಲಿ ಒಳಚರಂಡಿ ಅವ್ಯವಸ್ಥೆ: ಕುಡಿಯುವ ನೀರಿನ ಬಾವಿಗಳಿಗೂ ಕಲುಷಿತ ನೀರಿನ ಭೀತಿ
ವೈದ್ಯಕೀಯ ಕ್ಷೇತ್ರದ ಹೊಸ ಬೆಳವಣಿಗೆಗಳತ್ತ ಭಟ್ಕಳದ ವೈದ್ಯರ ಗಮನ




