ಭಟ್ಕಳ ಡೈರಿ ವರದಿ
ಭಟ್ಕಳ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮುಂಡಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಸಾರ್ವಜನಿಕ ರಸ್ತೆಗೆ ಅನಧಿಕೃತವಾಗಿ ತಡೆ ನಿರ್ಮಿಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಂಡಳ್ಳಿ ಹಳ್ಳೇರಕೇರಿಯ ಶೋಭಾ ರಾಮಚಂದ್ರ (೪೭), ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಲ್ಯಾಬ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಕ್ಟೋಬರ್ ೨೭ರಂದು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಮುಂಡಳ್ಳಿ ಗ್ರಾಮದ ಸರ್ವೆ ನಂಬರ್ ೧೨೬/೪ರಲ್ಲಿ ಖರಾಬು ಸೇರಿದಂತೆ ಒಟ್ಟು ೧೪ ಗುಂಟೆ ಜಾಗ ಶೋಭಾ ಅವರದ್ದಾಗಿದೆ. ಜಾಗವನ್ನು ಖರೀದಿಸಿ ತಮ್ಮ ಹೆಸರಿಗೆ ಮಾಡಿಕೊಂಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಜಾಗದಲ್ಲಿ ಕಂಪೌಂಡ್ ನಿರ್ಮಿಸುವ ಹಾಗೂ ಮನೆ ನವೀಕರಣ ಕಾಮಗಾರಿ ಆರಂಭಿಸಿದ ಸಂದರ್ಭದಲ್ಲಿ, ಆರೋಪಿತರು ಒಟ್ಟಾಗಿ ಸೇರಿ ಜಾಗಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಗೆ ಅನಧಿಕೃತವಾಗಿ ತಡೆ ನಿರ್ಮಿಸಿದ್ದಾರೆ. ಮುಂಡಳ್ಳಿ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗಿರುವ ಈ ರಸ್ತೆಯಲ್ಲಿ ‘ಅಂಬೇಡ್ಕರ್ ನಗರ’ ಎಂಬ ಫಲಕವನ್ನು ಅನಧಿಕೃತವಾಗಿ ಅಳವಡಿಸಿ, ಸಂಚಾರಕ್ಕೆ ತೊಂದರೆ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಿಗ್ಗೆ ೭ರ ಸುಮಾರಿಗೆ ಶೋಭಾ ಅವರ ಸಹೋದರ ಪ್ರದೀಪ್ ಮೇಲೆ ಹಲ್ಲೆ ನಡೆಸಲಾಗಿದೆ. ನಂತರ ಬೆಳಿಗ್ಗೆ ೯.೧೫ರ ಸುಮಾರಿಗೆ ಶೋಭಾ ಹಾಗೂ ಅವರ ತಂಗಿ ಮನೆಯಲ್ಲಿದ್ದಾಗ ಆರೋಪಿತರು ಅಲ್ಲಿಗೆ ಬಂದು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮನೆಯ ಕಂಪೌಂಡ್ಗೆ ನುಗ್ಗಿ ಹೂ ಕುಂಡಗಳನ್ನು ಒಡೆದು ಹಾನಿ ಮಾಡಿದ್ದು, ಕಲ್ಲು ತೂರಾಟ ನಡೆಸಲಾಗಿದೆ. ಇದೇ ವೇಳೆ ಚಪ್ಪಲಿ ತೋರಿಸಿ ಅವಾಚ್ಯವಾಗಿ ನಿಂದಿಸಿ, ಊರು ಬಿಟ್ಟು ಹೋಗುವಂತೆ ಹಾಗೂ ಇಲ್ಲವಾದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಶೋಭಾ ಆರೋಪಿಸಿದ್ದಾರೆ.
ಈ ಸಂಬಂಧ ಚಂದ್ರಶೇಖರ ಹಳ್ಳೇರ, ಮಹಾಬಳೇಶ್ವರ ಹಳ್ಳೇರ, ವಿನೋದ ಹಳ್ಳೇರ ಸೇರಿದಂತೆ ಒಟ್ಟು ೧೭ ಮಂದಿ ವಿರುದ್ಧ ದೂರು ನೀಡಲಾಗಿದೆ. ಆರೋಪಿತರೆಲ್ಲರೂ ಮುಂಡಳ್ಳಿ ಗ್ರಾಮದವರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರಿನ ಆಧಾರದ ಮೇಲೆ ಭಟ್ಕಳ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಜಾಗದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ; ವ್ಯಕ್ತಿಗೆ ಹಲ್ಲೆ ಆರೋಪ
ಹಾಲುಣಿಸುವ ವೇಳೆ ನೀಲಿಯಾದ ಮಗು: ಚಿಕಿತ್ಸೆ ಫಲಿಸದೆ ಸಾವು, ವೈದ್ಯರ ಮೇಲೆ ಹಲ್ಲೆ, ನಿರ್ಲಕ್ಷ್ಯ ಆರೋಪ




