ಭಟ್ಕಳ ಡೈರಿ ವರದಿ
ಭಟ್ಕಳ: ಗುಳ್ಮಿ ಕ್ರಾಸ್ ಬಳಿ ಶನಿವಾರ ರಾತ್ರಿ ಸಂಭವಿಸಿದ ಅಪಘಾತದ ಬೆನ್ನಲ್ಲೇ, ಭಾನುವಾರ ಬೆಳಗ್ಗೆ ಪ್ರಭಾರ ಡಿವೈಎಸ್ಪಿ ಗಿರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದ ಸ್ಥಳದಲ್ಲಿನ ರಸ್ತೆ ಪರಿಸ್ಥಿತಿ ಹಾಗೂ ಸಂಚಾರ ವ್ಯವಸ್ಥೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸ್ಥಳೀಯರ ಆಗ್ರಹದ ಮೇರೆಗೆ ಐಆರ್ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರೊಂದಿಗೆ ಮಾತುಕತೆಯೂ ನಡೆಯಿತು. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು. ಅಪಘಾತದ ಸ್ಥಳದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ವಾಹನ ಸವಾರರಿಗೆ ದಿಕ್ಕು ಸೂಚಿಸುವ ಫಲಕಗಳ ಕೊರತೆಯ ಬಗ್ಗೆ ಸ್ಥಳೀಯರು ಗಮನ ಸೆಳೆದರು. ತಕ್ಷಣವೇ ಸ್ಟ್ರೀಟ್ ಲೈಟ್ ಅಳವಡಿಸುವುದರ ಜೊತೆಗೆ ಹಂಪ್ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಕಿದ್ವಾಯಿ ರಸ್ತೆಯಿಂದ ಗುಳ್ಮಿ ಹಾಗೂ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಈ ಜಂಕ್ಷನ್ನಲ್ಲಿ ಸಿಗ್ನಲ್ ಮತ್ತು ದಿಕ್ಕು ಸೂಚನಾ ಫಲಕಗಳಿಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಇಂತಹ ಅಪಘಾತಗಳು ಸಂಭವಿಸುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ಈ ಹಿಂದೆ ಮುರುಡೇಶ್ವರ ಬಸ್ತಿ ಸಮೀಪವೂ ಇದೇ ರೀತಿಯ ಅಪಘಾತ ಸಂಭವಿಸಿತ್ತು ಎಂಬುದನ್ನು ಸ್ಥಳೀಯರು ಸ್ಮರಿಸಿದರು.
ಮತ್ತೊಂದು ಜೀವ ಬಲಿಯಾಗುವ ಮುನ್ನ ಗುಳ್ಮಿ–ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂಬ ಒತ್ತಾಯ ಕೇಳಿಬಂತು. ಅಂಡರ್ಪಾಸ್, ಟ್ರಾಫಿಕ್ ಸಿಗ್ನಲ್, ಸ್ಟ್ರೀಟ್ ಲೈಟ್, ಹಂಪ್ ಹಾಗೂ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಿ ಸಂಚಾರ ಸುರಕ್ಷತೆ ಖಚಿತಪಡಿಸಬೇಕು ಎಂದು ಪಾಂಡು ನಾಯ್ಕ ಮತ್ತಿತರರು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡಬೇಕು. ಅಪಘಾತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಯ ಅಡಿಗೆ ಸಿಲುಕಿ ಬೈಕ್ ಸವಾರ ಸಾವು
ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ನೋವಿಗೆ ಉತ್ತರ ತನಿಖೆ, ಹಲ್ಲೆಯಲ್ಲ




