ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರಾಭಿಮಾನ, ಶಿಸ್ತು ಹಾಗೂ ವ್ಯಕ್ತಿ–ರಾಷ್ಟ್ರ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಆರ್‌ಎಸ್‌ಎಸ್‌ ಉತ್ತರ ಪ್ರಾಂತ ಪರಿಸರ ಪರ್ಯಾವರಣ ಪ್ರಮುಖ ಹಾಗೂ ಕಾರ್ಯಕ್ರಮದ ವಕ್ತಾರ ಜಯರಾಮ ಬಳ್ಳಾಜೆ ಹೇಳಿದರು. ವಿಜಯದಶಮಿ ಅಂಗವಾಗಿ ಭಟ್ಕಳ ತಾಲೂಕು ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಪಟ್ಟಣದಲ್ಲಿ ಆಕರ್ಷಕ ಪಥಸಂಚಲನ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರದ ಸುಧೀಂದ್ರ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಜಯರಾಮ ಬಳ್ಳಾಜೆ, ಆರ್‌ಎಸ್‌ಎಸ್‌ನ ಕಾರ್ಯವಿಸ್ತಾರ ಕಳೆದ ನೂರು ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದ್ದು, ಸಂಘದ ತತ್ವಧಾರೆ ಇಂದು ಸುಮಾರು ೪೦ ದೇಶಗಳಿಗೆ ವಿಸ್ತರಿಸಿದೆ. ಸಂಘದ ಕಾರ್ಯಕರ್ತರಾಗುವವರಿಗೆ ರಾಷ್ಟ್ರಾಭಿಮಾನವೇ ಪ್ರಥಮ ಆದ್ಯತೆಯಾಗಬೇಕು. ಕಾರ್ಯಕರ್ತರ ನಡವಳಿಕೆ ಉತ್ತಮವಾಗಿದ್ದು, ಚಾರಿತ್ರ್ಯವಂತರಾಗಿರಬೇಕು. ಆಗ ಮಾತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ ಎಂದು ಅವರು ತಿಳಿಸಿದರು.

ಕಳೆದ ನೂರು ವರ್ಷಗಳಲ್ಲಿ ಆರ್‌ಎಸ್‌ಎಸ್‌ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ದೇಶದ ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಸಂಘದ ಕಾರ್ಯವೈಖರಿಗೆ ಜಗತ್ತಿನಾದ್ಯಂತ ಮನ್ನಣೆ ದೊರೆಯುತ್ತಿದೆ. ‘ವಸುದೈವ ಕುಟುಂಬಕಂ’ ಎಂಬ ಧ್ಯೇಯದೊಂದಿಗೆ ಸಂಘ ಕಾರ್ಯನಿರ್ವಹಿಸುತ್ತಿದೆ. ಮತಾಂಧತೆಯನ್ನು ಸಂಘ ಎಂದಿಗೂ ಒಪ್ಪುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶಿರಸಿ ವಿಭಾಗದ ಪ್ರಮುಖ ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು. ಆರ್‌ಎಸ್‌ಎಸ್‌ ತಾಲೂಕು ಕಾರ್ಯವಾಹ ವಸಂತ ನಾಯ್ಕ ಸ್ವಾಗತಿಸಿದರು. ದಾಸ ನಾಯ್ಕ ಶಿರಾಲಿ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ನೂರಾರು ಸ್ವಯಂಸೇವಕರು ಪಥಸಂಚಲನ ನಡೆಸಿದರು. ಗಣವೇಷಧಾರಿಗಳಾಗಿ ವೃದ್ಧರು, ಯುವಕರು ಹಾಗೂ ಚಿಕ್ಕಮಕ್ಕಳು ಭಾಗವಹಿಸಿದ್ದು, ಸಂಘದ ಕಾರ್ಯಕರ್ತರ ಶಿಸ್ತುಬದ್ಧ ಹೆಜ್ಜೆ ಹಾಗೂ ಗಣವೇಷಧಾರಿ ಮಕ್ಕಳ ಭಾಗವಹಿಸುವಿಕೆ ಸಾರ್ವಜನಿಕರ ಗಮನ ಸೆಳೆಯಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಪುಷ್ಪಾರ್ಚನೆಯ ಸ್ವಾಗತ, ಶಿಸ್ತಿನ ಹೆಜ್ಜೆ: ಭಟ್ಕಳದಲ್ಲಿ ಅದ್ದೂರಿ ಆರ್‌ಎಸ್‌ಎಸ್ ಪಥಸಂಚಲನ

ಶಿರಾಲಿ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ನೋವಿಗೆ ಉತ್ತರ ತನಿಖೆ, ಹಲ್ಲೆಯಲ್ಲ