ಭಟ್ಕಳ ಡೈರಿ ವರದಿ
ಭಟ್ಕಳ: ಸೃಜನಶೀಲ ಬರವಣಿಗೆಯಲ್ಲಿ ಅದ್ಭುತ ಪ್ರತಿಭೆ ಪ್ರದರ್ಶಿಸಿದ ಶಿರಾಲಿಯ ವಿದ್ಯಾರ್ಥಿನಿ ನಿನಾದ ಉಮೇಶ ಮುಂಡಳ್ಳಿ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಂಗೀತದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿರುವ ನಿನಾದಳ ಸಾಧನೆ ಭಟ್ಕಳ ತಾಲೂಕಿಗೆ ಹೆಮ್ಮೆ ತಂದಿದೆ.
ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನದ ಸಂಯುಕ್ತ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ಜಿಲ್ಲಾ ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ನಡೆಯಿತು. ನವೆಂಬರ್ ೪ರಂದು ಕಾರವಾರದ ಸ್ತ್ರೀಶಕ್ತಿ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಶಿರಾಲಿಯ ಚಿತ್ರಾಪುರದ ಶ್ರೀವಲ್ಲಿ ಪ್ರೌಢಶಾಲೆ ವಿದ್ಯಾರ್ಥಿನಿ ನಿನಾದ ಸೃಜನಾತ್ಮಕ ಬರವಣಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಸ್ಪರ್ಧೆಯ ವೇಳೆ ಸ್ಥಳದಲ್ಲಿಯೇ ನೀಡಲಾದ ವಿಷಯವನ್ನು ಆಧರಿಸಿ, ನಿಗದಿತ ಸಮಯದೊಳಗೆ ಸ್ವರಚಿತ ಕಥೆ, ಕವನ ಮತ್ತು ಪ್ರಬಂಧಗಳನ್ನು ರಚಿಸಿ ಪೂರ್ಣಗೊಳಿಸುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈ ಸಾಧನೆಯೊಂದಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಸ್ಪರ್ಧೆಗೆ ನಿನಾದ ಆಯ್ಕೆಯಾಗಿದ್ದಾಳೆ.
ಸಾಹಿತ್ಯ – ಸಂಗೀತದ ವಾತಾವರಣದಲ್ಲಿ ಅರಳಿದ ಪ್ರತಿಭೆ: ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಲೇಖಕ, ಪ್ರಕಾಶಕ ಹಾಗೂ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಮತ್ತು ಶಿಕ್ಷಕಿ, ಲೇಖಕಿ ರೇಷ್ಮಾ ಉಮೇಶ ದಂಪತಿಯ ಪುತ್ರಿ ನಿನಾದ. ಬಾಲ್ಯದಿಂದಲೇ ಸಾಹಿತ್ಯ ಮತ್ತು ಸಂಗೀತದ ವಾತಾವರಣದಲ್ಲಿ ಬೆಳೆದಿರುವ ನಿನಾದ, ಈಗಾಗಲೇ ಹಲವು ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ತಂದೆಯೊಂದಿಗೆ ಗಾಯನ ಪ್ರಸ್ತುತಪಡಿಸಿ ಗಮನ ಸೆಳೆದಿದ್ದಾಳೆ. ಇದೀಗ ಗಾಯನದ ಜೊತೆಗೆ ಸೃಜನಾತ್ಮಕ ಬರವಣಿಗೆಯಲ್ಲಿಯೂ ತನ್ನ ಸಾಮರ್ಥ್ಯವನ್ನು ತೋರಿಸಿರುವುದು ವಿಶೇಷವಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳದ ಅಳಿಯ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್
ಐಐಟಿ ಗುವಾಹಟಿ ಹ್ಯಾಕಥಾನ್ನಲ್ಲಿ ಎಐಟಿಎಂ ಭಟ್ಕಳ ವಿದ್ಯಾರ್ಥಿಗಳ ಮಿಂಚಿನ ಸಾಧನೆ



