ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಬಳಿ ಮುಖ್ಯರಸ್ತೆಯಲ್ಲಿರುವ ಪಿಎಲ್‌ಡಿ ಬ್ಯಾಂಕ್ ಎದುರು ಕುಡಿಯುವ ನೀರಿನ ಪೈಪ್‌ಲೈನ್ ಹಾನಿಗೊಂಡು ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ಅಪಾಯ ಎದುರಾಗಿದೆ. ಈಗಾಗಲೇ ಹಲವು ದ್ವಿಚಕ್ರ ವಾಹನ ಸವಾರರು ಜಾರಿಬಿದ್ದು ಅಪಘಾತಕ್ಕೀಡಾಗಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಐಆರ್‌ಬಿ ಕಾಮಗಾರಿ ವೇಳೆ ಪುರಸಭೆಗೆ ಸೇರಿದ ಕುಡಿಯುವ ನೀರಿನ ಪೈಪ್‌ಲೈನ್ ಹಾನಿಗೊಂಡಿದೆ. ಇದರಿಂದ ನೀರು ರಸ್ತೆಯ ಮೇಲೆ ಹರಿದು ರಸ್ತೆ ಜಾರುವಂತಾಗಿದೆ. ಸಮಸ್ಯೆ ಸರಿಪಡಿಸಲು ಐಆರ್‌ಬಿ ಅಧಿಕಾರಿಗಳು ಕಾಮಗಾರಿ ನಡೆಸಿದ್ದರೂ, ನೀರು ಸೋರಿಕೆ ಸಂಪೂರ್ಣವಾಗಿ ನಿಂತಿಲ್ಲ. ಪರಿಣಾಮವಾಗಿ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಅಪಘಾತದ ಭೀತಿಯಲ್ಲಿ ಪ್ರಯಾಣಿಸುವಂತಾಗಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯಲ್ಲೇ ಇಂತಹ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪುರಸಭೆ ತಕ್ಷಣ ಕ್ರಮ ಕೈಗೊಳ್ಳಲಿ: ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಐಆರ್‌ಬಿ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡುವಂತೆ ಹನುಮಾನ ನಗರದ ಶ್ರೀನಿವಾಸ ನಾಯ್ಕ ಪುರಸಭೆಯನ್ನು ಆಗ್ರಹಿಸಿದ್ದಾರೆ. ಹಾನಿಗೊಂಡಿರುವ ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿಗೊಳಿಸುವುದರ ಜೊತೆಗೆ ರಸ್ತೆಯ ಮೇಲಿನ ನೀರು ಹರಿಯದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ರಸ್ತೆಯನ್ನೂ ಸಮರ್ಪಕವಾಗಿ ದುರಸ್ತಿಗೊಳಿಸಿ ವಾಹನ ಸವಾರರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇನ್ನಷ್ಟು ಅಪಘಾತಗಳು ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ದೀಪಾವಳಿಗೆ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್: ಭಟ್ಕಳ ಸೇರಿ ಕರಾವಳಿ ಭಾಗದ ಹಲವು ನಿಲ್ದಾಣಗಳಲ್ಲಿ ವಿಶೇಷ ರೈಲು ನಿಲುಗಡೆ

ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ನಿನಾದ ಮುಂಡಳ್ಳಿ ಪ್ರಥಮ: ರಾಜ್ಯಮಟ್ಟಕ್ಕೆ ಆಯ್ಕೆ