ಭಟ್ಕಳ ಡೈರಿ ವರದಿ

ಭಟ್ಕಳ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಊರಿಗೆ ತೆರಳುವ ಮತ್ತು ಮರಳಿ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಯಶವಂತಪುರ–ಮಡಗಾಂವ್ ಹಾಗೂ ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ವಿಶೇಷವೆಂದರೆ, ಈ ಎರಡೂ ರೈಲುಗಳು ಭಟ್ಕಳ, ಮುರ್ಡೇಶ್ವರ ಸೇರಿದಂತೆ ಕರಾವಳಿ ಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.

ರೈಲು ಸಂಖ್ಯೆ ೦೬೫೯೧ ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ ೬ರಂದು ರಾತ್ರಿ ೧೧.೫೫ಕ್ಕೆ ಯಶವಂತಪುರದಿಂದ ಹೊರಡಲಿದ್ದು, ನವೆಂಬರ್ ೭ರಂದು ಸಂಜೆ ೬.೧೦ಕ್ಕೆ ಮಡಗಾಂವ್ ತಲುಪಲಿದೆ. ರೈಲು ಸಂಖ್ಯೆ ೦೬೫೯೨ ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ ೮ರಂದು ಬೆಳಗ್ಗೆ ೧೧ ಗಂಟೆಗೆ ಮಡಗಾಂವ್‌ನಿಂದ ಹೊರಟು, ನವೆಂಬರ್ ೯ರಂದು ಬೆಳಗ್ಗೆ ೫.೨೦ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?: ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಬಂಟ್ವಾಳ, ಮಂಗಳೂರು ಜಂಕ್ಷನ್, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲಾ, ಕಾರವಾರ ಹಾಗೂ ಕಾಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಇದರಿಂದ ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರು ಮತ್ತು ಗೋವಾ ನಡುವಿನ ಪ್ರಯಾಣಕ್ಕೆ ಹೆಚ್ಚುವರಿ ರೈಲು ಸೌಲಭ್ಯ ದೊರೆಯಲಿದೆ.

೧೯ ಬೋಗಿಗಳ ವಿಶೇಷ ರೈಲು: ಈ ವಿಶೇಷ ರೈಲುಗಳಲ್ಲಿ ಒಟ್ಟು ೧೯ ಬೋಗಿಗಳಿರಲಿವೆ. ಎಸಿ, ಸ್ಲೀಪರ್ ಮತ್ತು ಜನರಲ್ ಕ್ಲಾಸ್ ಬೋಗಿಗಳ ಜತೆಗೆ ಲಗೇಜ್ ಕಮ್ ಬ್ರೇಕ್‌ವ್ಯಾನ್ ಹಾಗೂ ದಿವ್ಯಾಂಗ ಚೇತನರಿಗಾಗಿ ಮೀಸಲಾದ ಬೋಗಿಯೂ ಇರಲಿದೆ. ಮಡಗಾಂವ್‌ನಿಂದ ಹೊರಡುವ ರೈಲು ಸಂಖ್ಯೆ ೦೬೫೯೨ ಯಶವಂತಪುರದಲ್ಲಿ ನಿಲುಗಡೆ ಹೊಂದುವುದಿಲ್ಲ. ಆದರೆ ಎಸ್‌ಎಂವಿಟಿ ಬೆಂಗಳೂರಿನಲ್ಲಿ ನಿಲುಗಡೆ ಇರಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ನಿನಾದ ಮುಂಡಳ್ಳಿ ಪ್ರಥಮ: ರಾಜ್ಯಮಟ್ಟಕ್ಕೆ ಆಯ್ಕೆ

ಭಟ್ಕಳದ ಅಳಿಯ ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್