ಭಟ್ಕಳ ಡೈರಿ ವರದಿ
ಭಟ್ಕಳ: ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಅಮೆರಿಕದ ಸೆನೆಟ್ಗೆ ಮೊದಲ ಮುಸ್ಲಿಂ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಡೆಮಾಕ್ರಟಿಕ್ ಪಕ್ಷದ ಅಬ್ದುಲ್ ಎಲ್-ಸಯೀದ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಗೆಲುವು ಅಮೆರಿಕದ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ರಾಜ್ಯದ ಕರಾವಳಿಯ ಭಟ್ಕಳದಲ್ಲೂ ವಿಶೇಷ ಸಂಭ್ರಮಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ, ನೂತನ ಸೆನೆಟರ್ ಅವರ ಪತ್ನಿಯ ಕುಟುಂಬದ ಬೇರುಗಳು ಭಟ್ಕಳದಲ್ಲಿವೆ!
ಅಮೆರಿಕದ ಮಿಚಿಗನ್ ರಾಜ್ಯದ ಸೆನೆಟ್ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ೪೨ ವರ್ಷದ ಅಬ್ದುಲ್ ಎಲ್-ಸಯೀದ್ ಅವರು ರಿಪಬ್ಲಿಕನ್ ಪಕ್ಷದ ೬೩ ವರ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಅಮೆರಿಕದ ಸೆನೆಟ್ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಐತಿಹಾಸಿಕ ದಾಖಲೆಗೆ ಅವರು ಪಾತ್ರರಾಗಿದ್ದಾರೆ. ಅವರು ೨೦೨೭ರ ಜನವರಿಯಲ್ಲಿ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಭಟ್ಕಳದ ಕುಟುಂಬದೊಂದಿಗೆ ಬೆಸೆದ ಅಮೆರಿಕದ ರಾಜಕೀಯ ಇತಿಹಾಸ: ಅಬ್ದುಲ್ ಎಲ್-ಸಯೀದ್ ಅವರ ಪತ್ನಿ ಡಾ. ಸಾರಾ ಜುಕಾಕು ಅವರ ಕುಟುಂಬ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರು. ಸಾರಾ ಅವರ ಕುಟುಂಬಕ್ಕೆ ಭಟ್ಕಳದೊಂದಿಗೆ ಹಲವು ತಲೆಮಾರುಗಳ ನಂಟಿದೆ. ಅವರ ಅಜ್ಜ ಜುಕಾಕು ಶಮ್ಸುದ್ದೀನ್ ಅವರು ಹಿಂದಿನ ಮೈಸೂರು ರಾಜ್ಯದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಬಿ.ಡಿ. ಜತ್ತಿ ಅವರ ಆಡಳಿತಾವಧಿಯಲ್ಲಿ ಹಣಕಾಸು ಖಾತೆಯ ಉಪಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಸಾರಾ ಅವರ ತಂದೆ ಡಾ. ಜುಕಾಕು ಎಸ್. ತೈಯೆಬ್ ಅವರು ಭಟ್ಕಳದಲ್ಲಿ ಆರಂಭಿಕ ಶಿಕ್ಷಣ ಪಡೆದು, ೧೯೭೬ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಿಸಿದ್ದರು. ಬಳಿಕ ವಿದೇಶಕ್ಕೆ ತೆರಳಿ, ಅಮೆರಿಕದ ಮಿಚಿಗನ್ನಲ್ಲಿ ವೈದ್ಯರಾಗಿ ನೆಲೆಸಿದರು.
ಸಾರಾ ಅವರ ಕುಟುಂಬದ ಹಲವು ಸದಸ್ಯರು ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ದೇಶದ ವಿವಿಧ ಭಾಗಗಳಿಗೆ ತೆರಳಿದ್ದರೂ, ಭಟ್ಕಳದೊಂದಿಗಿನ ಕುಟುಂಬದ ಸಂಬಂಧ ಮುಂದುವರಿದಿದೆ. ಹೀಗಾಗಿ ಅಮೆರಿಕದ ಸೆನೆಟ್ ಚುನಾವಣೆಯಲ್ಲಿ ಅಬ್ದುಲ್ ಎಲ್-ಸಯೀದ್ ಅವರ ಗೆಲುವು ಭಟ್ಕಳದ ಕುಟುಂಬಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ವಿಶ್ವವಿದ್ಯಾಲಯದಲ್ಲಿ ಆರಂಭವಾದ ಪ್ರೇಮಕಥೆ: ಅಬ್ದುಲ್ ಎಲ್-ಸಯೀದ್ ಮತ್ತು ಸಾರಾ ಜುಕಾಕು ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿದ್ದರು. ಇಬ್ಬರೂ ವಿಶ್ವವಿದ್ಯಾಲಯದ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು. ಬಳಿಕ ೨೦೦೬ರ ಮೇ ತಿಂಗಳಲ್ಲಿ ವಿವಾಹವಾದರು. ಈ ದಂಪತಿಗೆ ಎಮಲೀ ಮತ್ತು ಸೆರೀನ್ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸಾರಾ ಅವರು ವೈದ್ಯಕೀಯ ಶಿಕ್ಷಣದ ಬಳಿಕ ಮನೋವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಂಡಿದ್ದಾರೆ.
ಅಮೆರಿಕದಂತಹ ಪ್ರಭಾವಿ ರಾಷ್ಟ್ರದ ಸೆನೆಟ್ಗೆ ಮೊದಲ ಮುಸ್ಲಿಂ ಸದಸ್ಯರಾಗಿ ಆಯ್ಕೆಯಾಗುತ್ತಿರುವ ವ್ಯಕ್ತಿಯ ಕುಟುಂಬದ ಬೇರುಗಳು ಭಟ್ಕಳದಲ್ಲಿರುವುದು ಕರಾವಳಿ ಕರ್ನಾಟಕದ ಪಾಲಿಗೆ ವಿಶೇಷ ಸಂಗತಿ. ಸಮುದ್ರ ತೀರದ ಪುಟ್ಟ ಪಟ್ಟಣವಾದ ಭಟ್ಕಳದೊಂದಿಗೆ ಸಂಬಂಧ ಹೊಂದಿರುವ ಕುಟುಂಬದ ಅಳಿಯನೊಬ್ಬ ಅಮೆರಿಕದ ರಾಜಕೀಯ ಇತಿಹಾಸದಲ್ಲಿ ದಾಖಲೆ ನಿರ್ಮಿಸಿರುವುದು ಸ್ಥಳೀಯರ ಗಮನ ಸೆಳೆಯುತ್ತಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಮಿಚಿಗನ್ ಸೆನೆಟ್ ಚುನಾವಣೆ ಮೇಲೆ ಭಟ್ಕಳದ ಕಣ್ಣು: ಅಭ್ಯರ್ಥಿ ಪತ್ನಿಯ ತವರೂರು ಇಲ್ಲೇ!



