ಭಟ್ಕಳ ಡೈರಿ ವರದಿ

ಭಟ್ಕಳ: ಗ್ರಾಮ ಪಂಚಾಯತ್‌ಗಳಲ್ಲಿ ಹಗಲಿರುಳು ದುಡಿಯುವ ನೌಕರರಿಗೆ ಸರ್ಕಾರ ಪರಿಷ್ಕರಿಸಿ ಜಾರಿಗೊಳಿಸಿದ್ದ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಮತ್ತೆ ಕಡಿತಗೊಳಿಸಿ ಹಳೆಯ ವೇತನ ಪಾವತಿಸಲು ಮುಂದಾಗಿರುವ ಕ್ರಮಕ್ಕೆ ಭಟ್ಕಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಅಕ್ಟೋಬರ್ ತಿಂಗಳಿನಿಂದ ಹಳೆಯ ವೇತನ ಪಾವತಿಸುವ ನಿರ್ಧಾರವನ್ನು ತಕ್ಷಣ ಕೈಬಿಟ್ಟು, ಪರಿಷ್ಕೃತ ವೇತನವನ್ನೇ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ರಿ.) ಭಟ್ಕಳ ಒತ್ತಾಯಿಸಿದೆ. ಈ ಸಂಬಂಧ ಸಂಘದ ಪದಾಧಿಕಾರಿಗಳು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಬಿ. ಅವರಿಗೆ ಮನವಿ ಸಲ್ಲಿಸಿ, ವೇತನ ವಿಚಾರದಲ್ಲಿ ಉಂಟಾಗಿರುವ ಗೊಂದಲವನ್ನು ಶೀಘ್ರ ಪರಿಹರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರವು ರಾಜ್ಯಪತ್ರದ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಕನಿಷ್ಠ ವೇತನವನ್ನು ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಇದರಂತೆ ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್, ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ವಾಟರ್‌ಮನ್, ಡಾಟಾ ಎಂಟ್ರಿ ಆಪರೇಟರ್ ಹಾಗೂ ಸ್ವಚ್ಛತಾ ಸಿಬ್ಬಂದಿಗಳಿಗೆ ಜೂನ್ ೨೦೨೬ರಿಂದ ಪರಿಷ್ಕೃತ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆ ಪಾವತಿಸಲಾಗುತ್ತಿತ್ತು. ಆದರೆ, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯವು ಆಗಸ್ಟ್ ೨೮ರಂದು ಹೊರಡಿಸಿದ ಆದೇಶ ಹಾಗೂ ಸೆಪ್ಟೆಂಬರ್ ೧೮ರಂದು ನ್ಯಾಯಾಲಯ ನೀಡಿರುವ ತಡೆಯಾಜ್ಞೆಯಿಂದ ವೇತನ ಪಾವತಿ ವಿಚಾರದಲ್ಲಿ ಗೊಂದಲ ಉಂಟಾಗಿದೆ.

ಇದರ ಬೆನ್ನಲ್ಲೇ ಭಟ್ಕಳ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಪರಿಷ್ಕೃತ ವೇತನ ಪಾವತಿಸದಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಅಕ್ಟೋಬರ್‌ನಿಂದ ಹಳೆಯ ವೇತನವನ್ನೇ ಪಾವತಿಸಲಾಗುವುದು ಎಂದು ತಿಳಿಸಲಾಗುತ್ತಿದೆ ಎಂಬುದು ಸಂಘದ ಪ್ರಮುಖ ಆಕ್ಷೇಪವಾಗಿದೆ.

ಗ್ರಾಮೀಣ ಆಡಳಿತದ ಬೆನ್ನೆಲುಬಿಗೆ ಕಡಿಮೆ ವೇತನದ ಸಂಕಷ್ಟ: ಜನನ ಮತ್ತು ಮರಣ ನೋಂದಣಿ, ತೆರಿಗೆ ಸಂಗ್ರಹ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮಗಳ ಸ್ವಚ್ಛತೆ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಗ್ರಾಮೀಣ ಆಡಳಿತದ ಹಲವು ಜವಾಬ್ದಾರಿಗಳನ್ನು ಗ್ರಾಮ ಪಂಚಾಯತ್ ನೌಕರರು ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನಿರಂತರವಾಗಿ ಒದಗಿಸುವ ಈ ಸಿಬ್ಬಂದಿ ಈಗಾಗಲೇ ಕಡಿಮೆ ವೇತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಖರ್ಚುಗಳನ್ನು ನಿಭಾಯಿಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪರಿಷ್ಕೃತ ವೇತನವನ್ನು ಮತ್ತೆ ಕಡಿತಗೊಳಿಸಿ ಹಳೆಯ ವೇತನ ನೀಡುವ ಕ್ರಮ ನೌಕರರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದು ಸಂಘ ಆತಂಕ ವ್ಯಕ್ತಪಡಿಸಿದೆ.

ಮೌಖಿಕ ಸೂಚನೆ ಆಧಾರದಲ್ಲಿ ವೇತನ ಕಡಿತ ಸರಿಯಲ್ಲ: ಸರ್ಕಾರದ ಆದೇಶ ಮತ್ತು ನ್ಯಾಯಾಲಯದ ತಡೆಯಾಜ್ಞೆಯ ವ್ಯಾಪ್ತಿಯನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ಕಾನೂನುಬದ್ಧ ನಿರ್ಧಾರ ಕೈಗೊಳ್ಳಬೇಕು ಎಂದು ಸಂಘ ಆಗ್ರಹಿಸಿದೆ. ನ್ಯಾಯಾಲಯದ ಆದೇಶದ ಕುರಿತು ಸ್ಪಷ್ಟತೆ ಪಡೆದುಕೊಳ್ಳದೆ, ಯಾವುದೇ ಲಿಖಿತ ಆದೇಶವಿಲ್ಲದೆ ಕೇವಲ ಮೌಖಿಕ ಸೂಚನೆಯ ಆಧಾರದ ಮೇಲೆ ನೌಕರರ ವೇತನ ಕಡಿತಗೊಳಿಸುವುದು ಸಮಂಜಸವಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪರಿಷ್ಕೃತ ಕನಿಷ್ಠ ವೇತನ ಮತ್ತು ತುಟ್ಟಿಭತ್ಯೆಯನ್ನು ಮುಂದುವರಿಸುವುದರ ಜೊತೆಗೆ, ವೇತನ ಪಾವತಿಗೆ ಸಂಬಂಧಿಸಿದ ಗೊಂದಲವನ್ನು ಶೀಘ್ರ ಪರಿಹರಿಸಬೇಕು. ಈಗಾಗಲೇ ಬಾಕಿ ಉಳಿದಿರುವ ಪರಿಷ್ಕೃತ ವೇತನವಿದ್ದರೆ ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಘ ಒತ್ತಾಯಿಸಿದೆ.

ಸಂಘದ ತಾಲೂಕು ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಶ ನಾಯ್ಕ, ಉಪಾಧ್ಯಕ್ಷ ವಿನಾಯಕ ಆಚಾರ್ಯ, ಕಾರ್ಯದರ್ಶಿ ದಾಮೋದರ ನಾಯ್ಕ, ಸದಸ್ಯರಾದ ಮಾರುತಿ ನಾಯ್ಕ, ಶ್ರೀನಿವಾಸ ನಾಯ್ಕ, ವಿನಾಯಕ ಹೆಬಳೆ, ಶ್ರೀಧರ ನಾಯ್ಕ, ಜ್ಯೋತಿ ನಾಯ್ಕ, ದೇವಿ ದೇವಡಿಗ ಸೇರಿದಂತೆ ಹಲವು ಗ್ರಾಮ ಪಂಚಾಯತ್ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಮಣ್ಣಾಗುವ ಮುನ್ನವೇ ಕುಟುಂಬ ಸೇರಿದ ಅನಾಥ ಶವಗಳು

ಪಿಎಲ್ಡಿ  ಬ್ಯಾಂಕ್ ಎದುರು ರಸ್ತೆ ಜಾರುವ ಸ್ಥಿತಿ: ಪೈಪ್‌ಲೈನ್ ದುರಸ್ತಿ ವಿಳಂಬ, ದ್ವಿಚಕ್ರ ವಾಹನ ಸವಾರರಿಗೆ ಅಪಾಯ