ಭಟ್ಕಳ (Bhatkal): ತಾಲೂಕಿನ ಕಡವಿನಕಟ್ಟೆ ಮತ್ತು ಅಳಿವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ (Sri Durgaparameshwari) ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ (Navaratri) ಉತ್ಸವ ಅಕ್ಟೋಬರ ೩ರಿಂದ ಆರಂಭವಾಗಲಿದೆ.
ಕಡವಿನಕಟ್ಟೆ ಶ್ರೀ ದುರ್ಗಾಪರಮೇಶ್ವರಿ, ಕಿತ್ರೆ ದೇವಿಮನೆಯ ಶ್ರೀ ಕ್ಷೇತ್ರ ಬೆಣಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಯ್ಕಿಣಿಯ ಶಿವಮುನೀಶ್ವರ ಶಾಂತಾದುರ್ಗಾ ದೇವಸ್ಥಾನ, ಶ್ರೀ ನಾಗಯಕ್ಷೇ ದೇವಸ್ಥಾನ, ಶಿರಾಲಿ ಮಹಾಮ್ಮಾಯಿ ಮಹಾಗಣಪತಿ ದೇವಸ್ಥಾನ ಸೇರಿದಂತೆ ತಾಲೂಕಿನ ಇತರೆಡೆಗಳಲ್ಲಿ ಈ ನವರಾತ್ರಿ (Navaratri) ಉತ್ಸವಗಳು ವಿಜೃಂಭಣೆಯಿಂದ ನಡೆಯಲಿವೆ.
ಪಟ್ಟಣದ ನೆಹರೂ ರಸ್ತೆಯ ಶ್ರೀ ಶಾಂತೇರಿ ಕಾಮಾಕ್ಷೀ ದೇವಸ್ಥಾನದಲ್ಲಿ ೧೫ ದಿನ ನವರಾತ್ರಿಯ ಆಚರಣೆ ನಡೆಯಲಿದೆ. ಸೋನಾರಕೇರಿಯ ಮಹಾಲೆ ಸಮಾಜದ ಶ್ರೀ ಮಹಾಗಣಪತಿ, ಶ್ರೀ ಮಂಡಲೇಶ್ವರ ದೇವಸ್ಥಾನದಲ್ಲಿ ಘಟಸ್ಥಾಪನೆ ಮೂಲಕ ೧೧ ದಿನಗಳ ಕಾಲ ನವರಾತ್ರಿ ಆಚರಿಸಲಾಗುತ್ತದೆ. ಸರ್ಪನಕಟ್ಟೆ, ಮುರ್ಡೇಶ್ವರ, ಕಡವಿನಕಟ್ಟೆಯ ಶಕ್ತಿ ಸ್ಥಳಗಳಲ್ಲಿ ಅಮ್ಮನವರ ಪೂಜೆ ಪುರಸ್ಕಾರಗಳು ನಡೆಯಲಿವೆ. ಈ ಬಾರಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲು ಸಿದ್ದರಾಗಿದ್ದು, ಎಲ್ಲೆಲ್ಲೂ ಸಡಗರದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಪ್ರಸಿದ್ದ ಶಕ್ತಿಸ್ಥಳ ಶ್ರೀ ನಾಗಯಕ್ಷೇ ಮಹಾಸತಿ ಧರ್ಮದೇವಿ ಸಂಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ಪ್ರತಿದಿವೂ ವಿಶೇಷ ಪೂಜೆ, ಸೇವೆಗಳು ನಡೆಯಲಿವೆ.  ನವರಾತ್ರಿಯ ಪರ್ವ ಕಾಲದಲ್ಲಿ ಲಕ್ಷ ಹೂವಿನ ಪೂಜೆ, ದುರ್ಗಾ ನಮಸ್ಕಾರ, ೧೧, ೫, ೨ ಕಾಯಿ ಪೂಜೆಗಳು ಅತಿ ಹೆಚ್ಚು ನಡೆಯುತ್ತವೆ. ದೇಶವಿದೇಶಗಳಲ್ಲೂ ನಾಗಯಕ್ಷೆ ದೇವಿ ಭಕ್ತರನ್ನು ಹೊಂದಿದ್ದು, ಅಂತರ್ಜಾಲದಲ್ಲೂ ಪ್ರತಿದಿನ ಸಾವಿರಾರೂ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.