ಭಟ್ಕಳ ಡೈರಿ ವರದಿ
ಭಟ್ಕಳ: ಮನೆಯಲ್ಲಿಟ್ಟಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದರಿಂದ ತೀವ್ರ ಮನನೊಂದಿದ್ದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ. ನಾಪತ್ತೆಯಾಗಿದ್ದ ಅವರ ಮೃತದೇಹ ಬುಧವಾರ ಬೆಳಗಿನ ಜಾವ ಶಿರಾಲಿ ಗ್ರಾಮದ ಮೊಗೇರಕೇರಿ ಸಮೀಪದ ನದಿ ದಡದಲ್ಲಿ ಪತ್ತೆಯಾಗಿದೆ.
ಮೃತರನ್ನು ಮೂಲತಃ ಯಲ್ಲಾಪುರ ತಾಲೂಕಿನವರಾದ, ಪ್ರಸ್ತುತ ಭಟ್ಕಳ ತಾಲೂಕಿನ ಕೈಕಿಣಿ ಗ್ರಾಮದ ನಿವಾಸಿ ದಿನೇಶ ಮೋಹನ ಮಡಿವಾಳ (೪೨) ಎಂದು ಗುರುತಿಸಲಾಗಿದೆ.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಿನೇಶ ಅವರ ಮನೆಯ ಕಪಾಟಿನಲ್ಲಿ ಸುಮಾರು ೧೨ ತೊಲೆ ಚಿನ್ನಾಭರಣ ಇಡಲಾಗಿತ್ತು. ನವೆಂಬರ್ ೭ರಂದು ಕಪಾಟು ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು.
ಈ ಘಟನೆಯಿಂದ ದಿನೇಶ್ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ. ನವೆಂಬರ್ ೧೦ರಂದು ಮಧ್ಯಾಹ್ನ ೨.೪೫ರಿಂದ ರಾತ್ರಿ ೮ ಗಂಟೆಯ ನಡುವಿನ ಅವಧಿಯಲ್ಲಿ ವೆಂಕಟಾಪುರದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದ ಕೂಡಲೇ ಸಿಪಿಐ ವೆಂಕಟೇಶ ಮುರ್ನಾಳ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ನೆರವಿನಿಂದ ರಾತ್ರಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಆದರೆ ಅಂದು ಮೃತದೇಹ ಪತ್ತೆಯಾಗಿರಲಿಲ್ಲ.
ಬುಧವಾರ ನವೆಂಬರ್ ೧೧ರಂದು ಬೆಳಗಿನ ಜಾವ ಸುಮಾರು ೫.೧೫ಕ್ಕೆ ಶಿರಾಲಿ ಗ್ರಾಮದ ಮೊಗೇರಕೇರಿ ಸಮೀಪ ವೆಂಕಟಾಪುರ ನದಿ ದಡದಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ವೆಂಕಟಾಪುರದಲ್ಲಿ ಶೋಕ: ರಸ್ತೆ ಅಪಘಾತದಲ್ಲಿ ಮೀನುಗಾರ ಸಾವು
ಭಟ್ಕಳದಲ್ಲಿ ವಿದ್ಯುತ್ ಸಮಸ್ಯೆಗೆ ದಶಕಗಳ ಇತಿಹಾಸ: ಮಳೆ ಕಡಿಮೆಯಾದರೂ ವಿದ್ಯುತ್ ಕಣ್ಣಾಮುಚ್ಚಾಲೆ, ಅಸಮಾಧಾನ




