ಭಟ್ಕಳ ಡೈರಿ ವರದಿ
ಬೆಂಗಳೂರು: ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಪ್ರಸ್ತುತ ಮಡಗಾಂವ್–ಮಂಗಳೂರು ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರದ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ.
ಮಾರ್ಚ್ ೧೧ರಂದು ಮನವಿ: ಬೆಂಗಳೂರು ಮತ್ತು ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾರ್ಚ್ ೧೧, ೨೦೨೬ರಂದು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿರುವ ರೈಲ್ವೆ ಸಚಿವಾಲಯ, ಪ್ರಸ್ತುತ ಸಂಚರಿಸುತ್ತಿರುವ ಮಡಗಾಂವ್–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರ ಮಾರ್ಗವಾಗಿ ಯಶವಂತಪುರದವರೆಗೆ ವಿಸ್ತರಿಸಲು ಆದೇಶಿಸಿದೆ.
ಪರಿಷ್ಕೃತ ಸಂಖ್ಯೆಯೊಂದಿಗೆ ಸಂಚಾರ:
ವಿಸ್ತರಣೆಯ ಬಳಿಕ ರೈಲು ಪರಿಷ್ಕೃತ ವೇಳಾಪಟ್ಟಿಯೊಂದಿಗೆ ರೈಲು ಸಂಖ್ಯೆ ೨೬೬೫೫/೨೬೬೫೬ರ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿ ಸಂಚರಿಸಲಿದೆ. ಈ ರೈಲು ಉತ್ತರ ಕನ್ನಡದ ಪ್ರಮುಖ ಸ್ಥಳಗಳಾದ ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರ ಮಾರ್ಗವಾಗಿ ಸಂಚರಿಸುವುದರಿಂದ ಜಿಲ್ಲೆಯ ಜನರಿಗೆ ಬೆಂಗಳೂರು ಹಾಗೂ ಗೋವಾ ಭಾಗಗಳಿಗೆ ವೇಗದ ರೈಲು ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.
ಪ್ರವಾಸೋದ್ಯಮಕ್ಕೂ ಉತ್ತೇಜನ: ವಂದೇ ಭಾರತ್ ರೈಲು ವಿಸ್ತರಣೆಯಿಂದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಭಾಗದ ಜನರಿಗೆ ಪ್ರಯಾಣದ ಅನುಕೂಲ ಹೆಚ್ಚಲಿದೆ. ಅಲ್ಲದೆ, ಮುರ್ಡೇಶ್ವರ, ಗೋಕರ್ಣ ಸೇರಿದಂತೆ ಪ್ರಮುಖ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಹಾಗೂ ಪ್ರವಾಸಿಗರಿಗೆ ಇದು ಅನುಕೂಲವಾಗಲಿದೆ. ರೈಲು ಸಂಪರ್ಕದ ವಿಸ್ತರಣೆಯು ಕರಾವಳಿ ಭಾಗದ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುವ ನಿರೀಕ್ಷೆ ಇದೆ. ಈ ನಿರ್ಧಾರದಿಂದ ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರು–ಮಡಗಾಂವ್ ನಡುವೆ ವಾರಾಂತ್ಯ ವಿಶೇಷ ರೈಲು; ಭಟ್ಕಳ ಸೇರಿ ಕರಾವಳಿಯಲ್ಲಿ ನಿಲುಗಡೆ
ಮೈಸೂರು ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ: ಅ. ೨ರಂದು ಮುರುಡೇಶ್ವರ–ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ


