ಭಟ್ಕಳ ಡೈರಿ ವರದಿ

ಭಟ್ಕಳ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾವರ ತಾಲೂಕಿನ ಮಂಕಿ ನಿವಾಸಿಯೊಬ್ಬರು ಭಟ್ಕಳ ಮುಟ್ಟಳ್ಳಿ ಬೈಪಾಸ್ ರಸ್ತೆಯ ಬದಿಯ ಗಟಾರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಗುಳದಕೇರಿ, ಮಂಕಿ ನಿವಾಸಿ ಪ್ರಕಾಶ ಮಂಜುನಾಥ ನಾಯ್ಕ (೫೬) ಎಂದು ಗುರುತಿಸಲಾಗಿದೆ. ಅವರು ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಪೊಲೀಸ್ ದೂರಿನ ಪ್ರಕಾರ, ಪ್ರಕಾಶ ನಾಯ್ಕ ಅವರು ಕಳೆದ ನಾಲ್ಕು ತಿಂಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅಕ್ಟೋಬರ್ ೨೯ರಂದು ಬೆಳಗ್ಗೆ ಸುಮಾರು ೧೦.೩೦ಕ್ಕೆ ಮನೆಯಿಂದ ಹೊರಗೆ ಹೋದ ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಅವರ ಪತ್ತೆಗೆ ಮನವಿ ಮಾಡಿದ್ದರು.

ಪತ್ತೆ ಕಾರ್ಯ ಮುಂದುವರಿದಿದ್ದ ಸಂದರ್ಭದಲ್ಲಿ, ಭಟ್ಕಳ ಮುಟ್ಟಳ್ಳಿ ಬೈಪಾಸ್ ಸಮೀಪ ರಸ್ತೆಯ ಬದಿಯ ಗಟಾರದಲ್ಲಿ ವ್ಯಕ್ತಿಯೊಬ್ಬರು ಕಾಲು ಜಾರಿ ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ದೊರೆತಿದೆ. ಅವರು ಭಟ್ಕಳಕ್ಕೆ ಆಗಮಿಸಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹವನ್ನು ಪರಿಶೀಲಿಸಿದಾಗ, ಅದು ಪ್ರಕಾಶ ನಾಯ್ಕ ಅವರದ್ದೇ ಎಂದು ಗುರುತಿಸಿದ್ದಾರೆ. ಅಕ್ಟೋಬರ್ ೨೯ರಿಂದ ನವೆಂಬರ್ ೨ರ ಬೆಳಗ್ಗೆ ೧೦ ಗಂಟೆಯ ನಡುವಿನ ಅವಧಿಯಲ್ಲಿ ರಸ್ತೆ ಬದಿಯ ಗಟಾರಕ್ಕೆ ಬಿದ್ದು ಅವರು ಮೃತಪಟ್ಟಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತ್ಯುವಿನ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಮಾಹಿತಿ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ: ‘ರಾಷ್ಟ್ರಾಭಿಮಾನಕ್ಕೆ ಪ್ರಥಮ ಆದ್ಯತೆ’ ಎಂದ ಜಯರಾಮ ಬಳ್ಳಾಜೆ

ಪುಷ್ಪಾರ್ಚನೆಯ ಸ್ವಾಗತ, ಶಿಸ್ತಿನ ಹೆಜ್ಜೆ: ಭಟ್ಕಳದಲ್ಲಿ ಅದ್ದೂರಿ ಆರ್‌ಎಸ್‌ಎಸ್ ಪಥಸಂಚಲನ