ಭಟ್ಕಳ ಡೈರಿ ವರದಿ
ಭಟ್ಕಳ: ಬೆಂಗಳೂರು–ಗೋವಾ ಪ್ರಯಾಣಿಕರಿಗೆ ಗುಡ್ನ್ಯೂಸ್: ಕರಾವಳಿ ಕರ್ನಾಟಕದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಯಲಹಂಕ–ಮಡಗಾಂವ್ ನಡುವೆ ಸಂಚರಿಸಲಿರುವ ಈ ರೈಲು ಸುಮಾರು ೧೩ ಗಂಟೆ ೨೦ ನಿಮಿಷಗಳಲ್ಲಿ ಪ್ರಯಾಣ ಪೂರ್ಣಗೊಳಿಸಲಿದೆ.
ಅಕ್ಟೋಬರ್ ೩೦ರಂದು ರೈಲ್ವೆ ಮಂಡಳಿ ಹೊಸ ಸೇವೆಗೆ ಅನುಮೋದನೆ ನೀಡಿದ್ದು, ನವೆಂಬರ್ ಮೂರನೇ ವಾರದಲ್ಲಿ ರೈಲು ಸಂಚಾರ ಆರಂಭಿಸುವ ನಿರೀಕ್ಷೆಯಿದೆ. ಆದರೆ ಅಧಿಕೃತ ಉದ್ಘಾಟನಾ ದಿನಾಂಕ ಹಾಗೂ ಟಿಕೆಟ್ ದರ ಇನ್ನೂ ಪ್ರಕಟವಾಗಿಲ್ಲ.
ಭಟ್ಕಳ–ಮುರುಡೇಶ್ವರಕ್ಕೂ ನೇರ ಸಂಪರ್ಕ: ಹೊಸ ರೈಲು ಸೇವೆಯ ವಿಶೇಷತೆ ಎಂದರೆ ಕರಾವಳಿ ಕರ್ನಾಟಕದ ಹಲವು ಪ್ರಮುಖ ಸ್ಥಳಗಳಿಗೆ ನೇರ ಸಂಪರ್ಕ ಕಲ್ಪಿಸುವುದು. ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರದಲ್ಲಿ ನಿಲುಗಡೆ ಹೊಂದಲಿದೆ. ಗೋವಾ ಕಡೆಗೆ ತೆರಳುವ ಮಾರ್ಗದಲ್ಲಿ ಥೋಕೂರು ನಿಲ್ದಾಣದಲ್ಲೂ ರೈಲು ನಿಲ್ಲಲಿದೆ. ಇದರಿಂದ ಭಟ್ಕಳ, ಮುರುಡೇಶ್ವರ, ಬೈಂದೂರು, ಕುಂದಾಪುರ ಸೇರಿದಂತೆ ಕರಾವಳಿ ಭಾಗದ ಪ್ರಯಾಣಿಕರಿಗೆ ಬೆಂಗಳೂರು ಮತ್ತು ಗೋವಾ ನಡುವೆ ರೈಲು ಬದಲಾಯಿಸುವ ಅಗತ್ಯವಿಲ್ಲದೆ ನೇರವಾಗಿ ಸಂಚರಿಸುವ ಅವಕಾಶ ಸಿಗಲಿದೆ.
ಪಶ್ಚಿಮ ಘಟ್ಟದ ಹಸಿರು ಸೌಂದರ್ಯ: ಈ ರೈಲು ಪ್ರಯಾಣದ ಮತ್ತೊಂದು ಆಕರ್ಷಣೆ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಪಶ್ಚಿಮ ಘಟ್ಟ ಪ್ರದೇಶ. ದಟ್ಟ ಕಾಡು, ಹಸಿರು ಬೆಟ್ಟಗಳು ಹಾಗೂ ಪ್ರಕೃತಿ ಸೌಂದರ್ಯದ ನಡುವೆ ಸಾಗುವ ಈ ಮಾರ್ಗ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲಿದೆ. ಕರಾವಳಿಯ ಕಡಲತೀರಗಳು, ದೇವಾಲಯಗಳು ಹಾಗೂ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರಿಗೂ ಹೊಸ ರೈಲು ಸೇವೆ ಅನುಕೂಲವಾಗುವ ಸಾಧ್ಯತೆಯಿದೆ. ಉದ್ಯೋಗ, ಶಿಕ್ಷಣ ಹಾಗೂ ಧಾರ್ಮಿಕ ಉದ್ದೇಶಗಳಿಗಾಗಿ ಸಂಚರಿಸುವವರಿಗೂ ಇದು ಸಹಕಾರಿಯಾಗಲಿದೆ.
ರೈಲು ಸಮಯ:
ರೈಲು ಸಂಖ್ಯೆ ೨೬೬೫೫ ಯಲಹಂಕದಿಂದ ಬೆಳಗ್ಗೆ ೭.೩೫ಕ್ಕೆ ಹೊರಟು ರಾತ್ರಿ ೮.೫೫ಕ್ಕೆ ಮಡಗಾಂವ್ ತಲುಪಲಿದೆ. ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಈ ರೈಲು ಸಂಚರಿಸಲಿದೆ. ಹಿಂತಿರುಗುವ ರೈಲು ಸಂಖ್ಯೆ ೨೬೬೫೬ ಮಡಗಾಂವ್ನಿಂದ ಬೆಳಗ್ಗೆ ೮.೨೦ಕ್ಕೆ ಹೊರಟು ರಾತ್ರಿ ೯.೧೫ಕ್ಕೆ ಯಲಹಂಕ ತಲುಪಲಿದೆ. ಈ ರೈಲು ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.
ಮಂಗಳೂರು–ಮಡಗಾಂವ್ ವಂದೇ ಭಾರತ್ ಸೇವೆ ಸ್ಥಗಿತ: ಹೊಸ ಬೆಂಗಳೂರು–ಮಡಗಾಂವ್ ವಂದೇ ಭಾರತ್ ಸೇವೆ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಮಂಗಳೂರು ಸೆಂಟ್ರಲ್–ಮಡಗಾಂವ್ ನಡುವಿನ ವಂದೇ ಭಾರತ್ ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಿರುವುದನ್ನು ಇದಕ್ಕೆ ಕಾರಣವಾಗಿ ತಿಳಿಸಲಾಗಿದೆ.
ಟಿಕೆಟ್ ಬುಕ್ಕಿಂಗ್ಗೆ ಇನ್ನೂ ಕಾಯಬೇಕು: ಹೊಸ ರೈಲಿನ ಅಧಿಕೃತ ಆರಂಭ ದಿನಾಂಕ ಮತ್ತು ಟಿಕೆಟ್ ದರವನ್ನು ರೈಲ್ವೆ ಇಲಾಖೆ ಪ್ರಕಟಿಸಿದ ಬಳಿಕವೇ ಪ್ರಯಾಣಿಕರಿಗೆ ಬುಕ್ಕಿಂಗ್ ಅವಕಾಶ ಲಭ್ಯವಾಗಲಿದೆ.
ಬೆಂಗಳೂರು–ಗೋವಾ ನೇರ ಸಂಪರ್ಕದ ಜೊತೆಗೆ ಭಟ್ಕಳ, ಮುರುಡೇಶ್ವರ, ಗೋಕರ್ಣ, ಕಾರವಾರ ಸೇರಿದಂತೆ ಕರಾವಳಿ ಭಾಗದ ಪ್ರಯಾಣಿಕರಿಗೆ ಈ ರೈಲು ಸೇವೆ ಹೊಸ ಪ್ರಯಾಣದ ಆಯ್ಕೆಯಾಗುವ ನಿರೀಕ್ಷೆಯಿದೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳ ಮುಟ್ಟಳ್ಳಿ ಬೈಪಾಸ್ನಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ಭಟ್ಕಳದಲ್ಲಿ ಆರ್ಎಸ್ಎಸ್ ಪಥಸಂಚಲನ: ‘ರಾಷ್ಟ್ರಾಭಿಮಾನಕ್ಕೆ ಪ್ರಥಮ ಆದ್ಯತೆ’ ಎಂದ ಜಯರಾಮ ಬಳ್ಳಾಜೆ
ಪುಷ್ಪಾರ್ಚನೆಯ ಸ್ವಾಗತ, ಶಿಸ್ತಿನ ಹೆಜ್ಜೆ: ಭಟ್ಕಳದಲ್ಲಿ ಅದ್ದೂರಿ ಆರ್ಎಸ್ಎಸ್ ಪಥಸಂಚಲನ



