ಭಟ್ಕಳ ಡೈರಿ ವರದಿ
ಭಟ್ಕಳ: ವಿದ್ಯಾರ್ಥಿಗಳ ಭವಿಷ್ಯವನ್ನು ಕೇವಲ ಅಂಕಗಳ ಆಧಾರದ ಮೇಲೆ ನಿರ್ಧರಿಸಬಾರದು. ಶಿಕ್ಷಣದ ಜೊತೆಗೆ ಕಲೆ, ಕೌಶಲ ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಭಟ್ಕಳ ತಾಲೂಕು ಗಾಣಿಗ ಸಮಾಜ ಸೇವಾ ಟ್ರಸ್ಟ್ (ರಿ.) ಅಧ್ಯಕ್ಷ ಸುಭಾಷ ಶೆಟ್ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭಟ್ಕಳದ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ೨೦೨೬ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ: ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ, ಉತ್ತರ ಕನ್ನಡದ ಜಿಲ್ಲಾಧ್ಯಕ್ಷ ಗಜಾನನ ಆನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಟ್ಕಳದ ಗಾಣಿಗ ಸಮಾಜ ಸೇವಾ ಟ್ರಸ್ಟ್ ನಡೆಸುತ್ತಿರುವ ಸಮಾಜಮುಖಿ ಕಾರ್ಯಗಳು ಜಿಲ್ಲೆಯ ಇತರ ತಾಲೂಕುಗಳಿಗೂ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶೇ ೯೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ: ೨೦೨೬ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. ೯೦ಕ್ಕೂ ಹೆಚ್ಚು ಅಂಕ ಗಳಿಸಿದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಮೂಲಕ ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಸಮಾಜದ ಬೆಂಬಲ ಮತ್ತು ಪ್ರೋತ್ಸಾಹ ನೀಡಲಾಯಿತು.
ಸಮಾಜ ಸೇವೆ, ವೃತ್ತಿಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ: ಸಮಾಜ ಸೇವೆ ಹಾಗೂ ತಮ್ಮ ವೃತ್ತಿಯ ಮೂಲಕ ಗುರುತಿಸಿಕೊಂಡಿರುವ ಹರ್ಕೋಡಿನ ಕೃಷಿಕ ಹಾಗೂ ಸಮಾಜಸೇವಕ ನಾಗೇಂದ್ರ ಶೆಟ್ಟಿ, ಹೆರ್ತಾರದ ಆಟೋ ಚಾಲಕ ಪಾಂಡುರಂಗ ಶೆಟ್ಟಿ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಅವರನ್ನು ಸಾಧಕರಾಗಿ ಸನ್ಮಾನಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ತಾರಾ ಶೆಟ್ಟಿ ಹಾಗೂ ಆಶಾ ಶೆಟ್ಟಿ ಅವರನ್ನೂ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಟಾ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ಗೋಕರ್ಣದ ಸಮಾಜಸೇವಕ ಮಹೇಶ್ ಶೆಟ್ಟಿ, ಅಗ್ನಿಶಾಮಕ ಇಲಾಖೆಯ ನಿವೃತ್ತ ನೌಕರ ರಮೇಶ್ ಶೆಟ್ಟಿ, ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಆನಂದ ಶೆಟ್ಟಿ, ಗೋಪಾಲಕೃಷ್ಣ ಮತ್ತು ಮಣ್ಕುಳಿ ಹನುಮಂತ ಹಾಗೂ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಆಡಳಿತ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಎನ್. ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್ನ ಕಾರ್ಯದರ್ಶಿ ಮನೋಜ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿ, ಟ್ರಸ್ಟ್ನ ವಿವಿಧ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಸತ್ಯವತಿ ಶೆಟ್ಟಿ ಸ್ವಾಗತಿಸಿದರು. ಪೂರ್ಣಿಮಾ ಶೆಟ್ಟಿ, ಉಷಾ ಶೆಟ್ಟಿ ಹಾಗೂ ಗಾಯತ್ರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಧಾ ರವೀಂದ್ರ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿ ಹಾಗೂ ಸುರೇಖಾ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಪ್ರಕಾಶ್ ಶಿರಾಲಿ ವಂದನಾರ್ಪಣೆ ಮಾಡಿದರು.
ಇದನ್ನೂ ಓದಿ :
ಭಟ್ಕಳ ರಾಜಕೀಯದಲ್ಲಿ ಚರ್ಚೆಗೆ ಬರುತ್ತಿರುವ ಹೆಸರು; ಸೈನಿಕ ಸೇವೆಯಿಂದ ಸಂಘಟನೆಯ ಮುಂಚೂಣಿಗೆ ಶ್ರೀಕಾಂತ ನಾಯ್ಕ
ಭಟ್ಕಳದಲ್ಲಿ ನವೆಂಬರ್ ೧ರಂದು ಆರ್ಎಸ್ಎಸ್ ಭವ್ಯ ಪಥಸಂಚಲನ: ಇಲ್ಲಿದೆ ಸಂಪೂರ್ಣ ಮಾರ್ಗ




