ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ಶಿರಾಲಿ ಸಮೀಪ ಜಾಗದ ವಿಚಾರವಾಗಿ ನಡೆದ ಮಾತಿನ ಚಕಮಕಿಯೊಂದು ಹಲ್ಲೆ ಆರೋಪದವರೆಗೆ ತಲುಪಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಾಲಿ ನಿವಾಸಿ ರಮೇಶ ಮಾಸ್ತಪ್ಪ ನಾಯ್ಕ (೫೦) ಅವರು ದೂರು ನೀಡಿದ್ದು, ಘಟನೆ ಅಕ್ಟೋಬರ್ ೨೭ರಂದು ಸಂಜೆ ಸುಮಾರು ೫ ಗಂಟೆಗೆ ನಡೆದಿದೆ ಎಂದು ತಿಳಿಸಿದ್ದಾರೆ.

ದೂರಿನ ಪ್ರಕಾರ, ರಮೇಶ ಅವರು ಶಿರಾಲಿಯಿಂದ ಗುಡಿಹಿತ್ತಲಿನಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ, ಪರಿಚಯದ ಗಿರೀಶ ಶೆಟ್ಟಿ ಅವರ ಜಾಗದ ಸಮೀಪ ಮಣ್ಣಿನ ಲಾರಿ ಬಂದಿರುವ ವಿಚಾರವಾಗಿ ಗಿರೀಶ ಶೆಟ್ಟಿ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ವೇಳೆ ಅಲ್ಲಿಗೆ ತೆರಳಿದ ರಮೇಶ ಅವರನ್ನು ದೇವರಾಜ ಈಶ್ವರ ನಾಯ್ಕ ಎಂಬವರು ತಡೆದು, ‘ನಿನ್ನ ಜಾಗ ಇಲ್ಲಿ ಇಲ್ಲ, ನೀನು ಯಾಕೆ ಇಲ್ಲಿ ಬಂದಿದ್ದೀಯಾ?’ ಎಂದು ಪ್ರಶ್ನಿಸಿ ಜಗಳ ತೆಗೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ದೇವರಾಜ ನಾಯ್ಕ ಸೇರಿದಂತೆ ಇತರ ಆರೋಪಿಗಳು ಮಾತಿಗೆ ಮಾತು ಬೆಳೆಸಿದ್ದು, ದೇವರಾಜ ನಾಯ್ಕ ಅವರು ಕೈಯಿಂದ ರಮೇಶ ಅವರ ಬಲ ಭುಜಕ್ಕೆ ಹೊಡೆದು ಕೆಳಗೆ ದೂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ದೇವರಾಜ ಈಶ್ವರ ನಾಯ್ಕ, ಕಿರಣ ನಾಯ್ಕ, ರವಿ ನಾಯ್ಕ, ನಾರಾಯಣ ನಾಗಪ್ಪ ನಾಯ್ಕ, ಮೊಹಮ್ಮದ್ ಅಸ್ಲಂ, ಚಂದ್ರು ಕುಮಾರ ನಾಯ್ಕ ಹಾಗೂ ತರುಣ ಪರಮೇಶ್ವರ ನಾಯ್ಕ ವಿರುದ್ಧ ದೂರು ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಾಗಿದ್ದು, ಮುಂದಿನ ಕಾನೂನು ಕ್ರಮದ ವಿವರಗಳು ತನಿಖೆಯ ಬಳಿಕ ತಿಳಿದುಬರಬೇಕಿದೆ.

ಇದನ್ನೂ ಓದಿ :

ಹಾಲುಣಿಸುವ ವೇಳೆ ನೀಲಿಯಾದ ಮಗು: ಚಿಕಿತ್ಸೆ ಫಲಿಸದೆ ಸಾವು, ವೈದ್ಯರ ಮೇಲೆ ಹಲ್ಲೆ, ನಿರ್ಲಕ್ಷ್ಯ ಆರೋಪ

ವೈದ್ಯಕೀಯ ಕ್ಷೇತ್ರದ ಹೊಸ ಬೆಳವಣಿಗೆಗಳತ್ತ ಭಟ್ಕಳದ ವೈದ್ಯರ ಗಮನ