ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಬೆಳಕೆ ಗರಡಿಹಿತ್ತು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸರು ಕ್ಷಿಪ್ರವಾಗಿ ಭೇದಿಸಿ, ಆರೋಪಿತನನ್ನು ಬಂಧಿಸಿದ್ದಾರೆ.
ಸೆ.೨೮ರ ರಾತ್ರಿ ೧೦ ಗಂಟೆಯಿಂದ ಸೆ.೨೯ರ ಬೆಳಗಿನ ಜಾವ ೫ ಗಂಟೆಯ ನಡುವಿನ ಅವಧಿಯಲ್ಲಿ ದೇವಸ್ಥಾನದ ಬೀಗ ಹಾಗೂ ಕಟ್ಟಿಗೆಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರು. ಬಳಿಕ ದೇವರ ಕುತ್ತಿಗೆಯಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ಪತ್ತೆ ತಂಡವನ್ನು ರಚಿಸಲಾಗಿತ್ತು.
ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ತಲಹಾ ಕಾಲೋನಿ, ಹನೀಫಾಬಾದ್, ಹೆಬಳೆ ನಿವಾಸಿ ಸೈಯದ್ ಯೂನುಸ್ (೨೬) ಎಂಬಾತನನ್ನು ಸೆ.೩೦ರಂದು ಬಂಧಿಸಿದ್ದಾರೆ. ಆರೋಪಿತನಿಂದ ಸುಮಾರು ₹೧,೦೭,೩೦೦ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ೫.೩೪೦ ಗ್ರಾಂ ತೂಕದ ಬಂಗಾರದ ಸರ, ೨೦ ಗ್ರಾಂ ತೂಕದ ಬೆಳ್ಳಿಯ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬಜಾಜ್ ಪಲ್ಸ್ ಮೋಟಾರ್ಸೈಕಲ್ ಸೇರಿವೆ.
ಬಂಧಿತ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಭಟ್ಕಳ ಗ್ರಾಮೀಣ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ., ತನಿಖಾಧಿಕಾರಿ ಪಿಎಸ್ಐ ಭರಮಪ್ಪ ಬೆಳಗಲಿ, ಪಿಎಸ್ಐ ಮಲ್ಲಿಕಾರ್ಜುನಯ್ಯ ಕೂರಾಣಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನ ಕಳ್ಳತನ ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಆರೋಪಿತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ :
ಮಾನ್ವಿತ ಆಚಾರಿಗೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ; ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಮಹಾರಾಷ್ಟ್ರದಲ್ಲಿ ಜನಮನಸೆಳೆದ ಕನ್ನಡಿಗರ ‘ಗಣಪತಿ ಬಪ್ಪ ಭಜನಾಮೃತ’


