ಭಟ್ಕಳ: ಇಲ್ಲಿನ ಪುರಸಭೆಯಲ್ಲಿ ಆಡಳಿತಾಧಿಕಾರಿ ಮತ್ತು ಸಹಾಯಕ ಆಯುಕ್ತೆ ಡಾ.ನಯನಾ ಅಧ್ಯಕ್ಷತೆಯಲ್ಲಿ ನಡೆದ ಒಳಚರಂಡಿ (Drainage) ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಮಗಾರಿ ಕಳಪೆ ಆಗಿದೆ ಎಂದು ಆರೋಪಿಸಿ ಗುತ್ತಿಗೆದಾರರಿಗೆ ಯಾವುದೇ ಕಾರಣಕ್ಕೂ ಬಿಲ್ ಪಾವತಿಸಬಾರದು ಎಂದು ಸದಸ್ಯರು ಆಗ್ರಹಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷ ಕೈಸರ್, ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಜ್ ಕಾಶೀಮಜಿ, ಸದಸ್ಯರಾದ ಅಲ್ತಾಪ್ ಖರೂರಿ, ಇಮ್ಶಾದ್, ಅಬ್ದುಲ್ ರವೂಪ್ ಮುಂತಾದವರು ಪುರಸಭೆ ವ್ಯಾಪ್ತಿಯಲ್ಲಿ ಮಾಡಿರುವ ಒಳಚರಂಡಿ (Drainage) ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಮ್ಯಾನ್ ಹೋಲ್ ಕಳಪೆಯಾಗಿದೆ. ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ಉತ್ತಮ ದರ್ಜೆಯ ಪೈಪ್ ಬಳಸಿಲ್ಲ. ಮಳೆಗಾಲದಲ್ಲಿ ಮ್ಯಾನ್ ಹೋಲ್ ನಿಂದ ಮಳೆನೀರು ಹರಿಯುತ್ತಿದೆ. ಕಾಮಗಾರಿಯನ್ನು ಇಂಜಿನಿಯರ ಸರಿಯಾಗಿ ಪರಿಶೀಲಿಸಿಲ್ಲ ಎಂದು ಆರೋಪಿಸಿದರು. ಒಳಚರಂಡಿ ಕಾಮಗಾರಿ ಸಮರ್ಪಕ ಆಗದೇ ಇರುವುದನ್ನು ಸಾರ್ವಜನಿಕರು ನಮ್ಮ ಬಳಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಮ್ಮಿಂದ ಉತ್ತರ ಕೊಡುವುದು ಕಷ್ಟವಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಮಾಡಲಾದ ಒಳಚರಂಡಿ ಕಾಮಗಾರಿಯ ಗುಣಮಟ್ಟವನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ. ಹೀಗಾಗಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ಸದಸ್ಯರು ಆಗ್ರಹಿಸಿದರು.
ಇದನ್ನೂ ಓದಿ : ಆಗಸ್ಟ್ ೯ರಂದು ವಿವಿಧೆಡೆ ಅಡಿಕೆ ಧಾರಣೆ
ಸದಸ್ಯರಿಂದ ಒಳಚರಂಡಿ ಕಾಮಗಾರಿ ಬಗ್ಗೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಒಳಚಂಡಿ ಅಭಿಯಂತರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆಡಳಿತಾಧಿಕಾರಿ ಡಾ. ನಯನಾ, ಪುರಸಭೆಯ ಅಭಿಯಂತರು, ವಾರ್ಡ ಸದಸ್ಯರು ಹಾಗೂ ಒಳಚರಂಡಿ ಅಭಿಯಂತರು ಒಳಚರಂಡಿ ಮ್ಯಾನಹೋಲ್ ಸೇರಿದಂತೆ ಕಾಮಗಾರಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ೧೫ ದಿನಗಳಲ್ಲಿ ವರದಿ ನೀಡಬೇಕು. ಒಳಚರಂಡಿ ಸೈಟ್ ಇಂಜಿನಿಯರ್ ಜನರ ಕೈಗೆ ಸಿಗುತ್ತಿಲ್ಲ ಎನ್ನುವ ದೂರಿದೆ. ಇದಕ್ಕಾಗಿ ಇಂಜಿನಿಯರ್ ದಿನಂಪ್ರತಿ ಬೆಳಿಗ್ಗೆ ಮತ್ತು ಸಂಜೆ ಪುರಸಭೆ ಆಗಮಿಸಿ ಹಾಜರಿ ಹಾಕಬೇಕು. ಅದರಂತೆ ಒಳಚರಂಡಿ ಅಭಿಯಂತರು ವಾರದ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ ಪುರಸಭೆಯಲ್ಲಿದ್ದು ಒಳಚರಂಡಿ ಕಾಮಗಾರಿಯ ಸಮಸ್ಯೆ ಆಲಿಸಬೇಕು. ಜನರ ದೂರು ಸ್ವೀಕರಿಸಬೇಕು ಎಂದು ತಾಕೀತು ಮಾಡಿದರು.
ಇದನ್ನೂ ಓದಿ : ಪಹಣಿಯೊಂದಿಗೆ ಆಧಾರ್ ಜೋಡಣೆಗೆ ಆ.೧೫ರವರೆಗೆ ವಿಸ್ತರಣೆ
ಮಾಜಿ ಅಧ್ಯಕ್ಷ ಪರ್ವೇಜ ಕಾಶೀಮಜಿ ಮಾತನಾಡಿ, ಒಳಚರಂಡಿ ಕಾಮಗಾರಿ ಬಗ್ಗೆ ಗಂಭೀರ ಪ್ರಮಾಣದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಧಾರವಾಡದಲ್ಲಿರುವ ಮುಖ್ಯ ಇಂಜಿನಿಯರ್ ಅವರನ್ನು ಭಟ್ಕಳಕ್ಕೆ ಕರೆಯಿಸಬೇಕು. ಕಾಮಗಾರಿ ಕಳಪೆ ಬಗ್ಗೆ ವಿಜಿಲೆನ್ಸಗೆ ದೂರು ನೀಡುವುದೇ ಉತ್ತಮ. ಒಳಚರಂಡಿ ಕಾಮಗಾರಿಯಿಂದ ಜನರು ರೋಸಿ ಹೋಗಿದ್ದು, ನಾವು ದೂರು ನೀಡದೇ ಇದ್ದರೆ ಎನ್ ಜಿ ಓ ಮುಖ್ಯಸ್ಥರು ಸಂಬಂಧಿಸಿದವರಿಗೆ ದೂರು ನೀಡಲಿದ್ದಾರೆ ಎಂದರು. ಪುರಸಭೆ ಸದಸ್ಯ ಇಮ್ಶಾದ್ ಮಾತನಾಡಿ, ಒಳಚರಂಡಿ ಅರ್ಧಂಬರ್ಧ ಕಾಮಗಾರಿಯಿಂದ ರಸ್ತೆ ಹಾಳಾಗಿದೆ. ಕೆಲವು ವಾರ್ಡ್ ಗಳಲ್ಲಿ ಶೇ. ೨೫ರಷ್ಟೂ ಕೆಲಸ ಆಗಿಲ್ಲ ಎಂದು ದೂರಿದರು. ಒಳಚರಂಡಿ ಅಭಿಯಂತರ ಆಡಳಿತಾಧಿಕಾರಿಗೆ ಕೆಲವು ವಾರ್ಡಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವುದು ಮತ್ತು ಕಾಮಗಾರಿ ಗುಣಮಟ್ಟದಿಂದ ನಡೆದಿರುವ ಬಗ್ಗೆ ಸ್ಥಳೀಯರ ಸಹಿ ಇದ್ದ ಪತ್ರ ತೋರಿಸಿದಾಗ ಗರಂ ಆದ ಆಡಳಿತಾಧಿಕಾರಿ ಡಾ. ನಯನಾ ಅವರು, ಇದು ಮಕ್ಕಳು ಬರೆದಿರುವ ಲೆಟರ್ ರೀತಿ ಇದೆ. ಇದೆಲ್ಲಾ ಸರಿಯಲ್ಲ. ಪುರಸಭೆ ಸದಸ್ಯರು ಒಳಚರಂಡಿ ಕಾಮಗಾರಿ ಗುಣಮಟ್ಟದಿಂದ ನಡೆದಿಲ್ಲ. ಕಳಪೆ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ಪುರಸಭೆ ಇಂಜಿನಿಯರ್ ಶೇ. ೨೫ರಷ್ಟು ಒಳಚರಂಡಿ ಕಾಮಗಾರಿ ಪರಿಶೀಲಿಸಿ ಕಾಮಗಾರಿ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ನೀವು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಹೇಳುತ್ತಿದ್ದೀರಿ. ಕಾಮಗಾರಿ ಪರಿಶೀಲನೆ ನಡೆಸುವಾಗ ನನ್ನ ಗಮನಕ್ಕೂ ತಂದಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಭಕ್ತಿಮಾರ್ಗ ಮುಕ್ತಿಗೆ ದಾರಿ: ರಾಘವೇಶ್ವರ ಶ್ರೀ
ಪಟ್ಟಣದಲ್ಲಿರ ನಡೆದಿರುವ ಶೇ. ೭೫ ರಷ್ಟು ಕಾಮಗಾರಿಯನ್ನು ಕೂಲಂಕುಶವಾಗಿ ಪರಿಶೀಲಿಸಿ ೧೫ ದಿನಗಳಲ್ಲಿ ನನಗೆ ವರದಿ ಕೊಡಬೇಕು. ಜನರ ಅಹವಾಲಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ನಿಮ್ಮ ಕಾಮಗಾರಿಯಿಂದ ಜನತೆಗೆ ಯಾವುದೇ ರೀತಿಯ ತೊಂದರೆ ಆದಲ್ಲಿ ಸಹಿಸುವುದಿಲ್ಲ ಎಂದು ಖಾರವಾಗಿ ಎಚ್ಚರಿಕೆ ನೀಡಿದರು. ಉಪಸ್ಥಿತರಿದ್ದ ಒಳಚರಂಡಿ ಇಂಜಿನಿಯರಗಳನ್ನು ಪುರಸಭೆ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡು ಕಾಮಗಾರಿ ಗುಣಮಟ್ಟದಿಂದ ಆದರೆ ಮಾತ್ರ ನೀವು ಬಿಲ್ ಬರೆಯಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ದೂರು ನೀಡುವುದುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಪುರಸಭೆಯ ಅಧಿಕಾರಿಗಳು, ಸದಸ್ಯರಾದ ಕೃಷ್ಣಾನಂದ ಪೈ, ಪಾಸ್ಕಲ್ ಗೋಮ್ಸ, ಜಗನ್ನಾಥ ಗೊಂಡ, ಫಯ್ಯಾಜ್ ಮುಲ್ಲಾ ಮುಂತಾದವರಿದ್ದರು.