ಭಟ್ಕಳ: ಕಾರ್ಯನಿರತ ಪತ್ರಕರ್ತರ ಧ್ವನಿ(ರಿ ) ಬೆಂಗಳೂರು ಹಾಗೂ ಭಟ್ಕಳ ತಾಲೂಕು ಘಟಕದ ಸಹಯೋಗದಲ್ಲಿ ಇಲ್ಲಿನ ನಾಗಯಕ್ಷೆ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗಂಗಾಧರ ನಾಯ್ಕ ಹಾಗೂ ಶ್ರೀಧರ್ ಶೇಟ್ ಅವರಿಗೆ ಕರ್ನಾಟಕ ಸಾಧಕ ಶ್ರೇಷ್ಠ ರತ್ನ ಪ್ರಶಸ್ತಿ (Outstanding Achiever) ಪ್ರದಾನ ಮಾಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗಂಗಾಧರ ನಾಯ್ಕ ಅವರು ಸಾಹಿತ್ಯ ಸಂಗೀತ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಭಟ್ಕಳ ತಾಲೂಕು ಘಟಕಕ್ಕೆ ಎರಡನೆಯ ಬಾರಿ ಅಧ್ಯಕ್ಷರಾಗಿದ್ದು ಪರಿಷತ್ತನ್ನು ತಾಲೂಕಿನ ಮನೆ ಮನಗಳಿಗೆ ತಲುಪಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮೂಲಕ ಜಿಲ್ಲೆಯಲ್ಲಿಯೇ ಅತ್ಯಂತ ಹೆಚ್ಚು ಕಾರ್ಯಕ್ರಮ ಸಂಘಟಿಸಿ ‘ಸಾಹಿತ್ಯ ಸಾರಥ್ಯ’ ಪ್ರಶಸ್ತಿ ಪಡೆದಿದ್ದಾರೆ. ಸಾಹಿತಿಯಾಗಿಯೂ ಭಾನುಭಾವ ಎಂಬ ಹನಿಗವಿತೆಗಳ ಸಂಕಲನ, ನಮ್ಮ ಆಚರಣೆ ರೂಢಿ ಸಂಪ್ರದಾಯಗಳ ಹಿಂದಿನ ವೈಚಾರಿಕ ಚಿಂತನೆಗಳ ಕುರಿತ ‘ಆಚಾರ ಸುವಿಚಾರ’ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಗಾಯನ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಗಂಗಾಧರ ನಾಯ್ಕ ಭಟ್ಕಳ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿ ಈ ಟಿವಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡಿ ಎಸ್ ಪಿ ಬಾಲಸುಬ್ರಮಣ್ಯo ಅವರಿಂದ ಪ್ರಶಂಸೆ ಪಡೆದವರು. ನಿರೂಪಕ, ಉಪನ್ಯಾಸಕ, ಸಂಘಟಕ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಬಹುಮುಖ ಪ್ರತಿಭೆಯ ಗಂಗಾಧರ ನಾಯ್ಕ ಅವರಿಗೆ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು ಇವರು ಕರ್ನಾಟಕ ಸಾಧಕ ಶ್ರೇಷ್ಠ ರತ್ನ (Outstanding Achiever) ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇದನ್ನು ಓದಿ: drinking water/ ಕುಡಿಯುವ ನೀರಿನ ಘಟಕ ಉದ್ಘಾಟನೆ
ಶ್ರೀಧರ್ ಶೇಟ್ ಅವರು ಶಿಕ್ಷಕರಾಗಿ, ಸಾಹಿತಿ, ವ್ಯಂಗ್ಯ ಚಿತ್ರಕಾರ, ಚಿತ್ರಕಲಾವಿದ, ನಿರೂಪಕರಾಗಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. ಉತ್ತಮ ಶಿಕ್ಷಕರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ೨೦೨೫ನೇ ಸಾಲಿನ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರ ಬೇಲಿಯ ಹೂವು ಕವಿತೆ ಐ ಸಿ ಎಸ್ ಸಿ ಪಠ್ಯಕ್ರಮದ ೫ನೇ ತರಗತಿಯ ಕನ್ನಡ ಚಂದನ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಧ್ವನಿಪೂರ್ಣ ಮತ್ತು ಗಟ್ಟಿತನದ ಕವಿಯಾಗಿ ನಾಡಿನಲ್ಲಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗೆ ಭಟ್ಕಳ ತಾಲೂಕಾ ಒಂಭತ್ತನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ಪಡೆದಿದ್ದಾರೆ. ಇವರ ಬಹುಮುಖ ಕೊಡುಗೆಯನ್ನು ಗಮನಿಸಿ ಕಾರ್ಯ ನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು ಇವರು ಕರ್ನಾಟಕ ಸರ್ಕಾರಿ ಸೇವಾ ಶ್ರೇಷ್ಠ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇದನ್ನು ಓದಿ: Achievement Award/ ಉದ್ಯಮಿ ಅಶೋಕ ಶಂಕರ ಭಟ್ಟಗೆ ಸಾಧಕ ಪ್ರಶಸ್ತಿ



