ಭಟ್ಕಳ : ತಾಲೂಕಿನ ಹೆಬಳೆ ಪಂಚಾಯತ ವ್ಯಾಪ್ತಿಯ ತೆಂಗಿನಗುಂಡಿ ಬೀಚ್ ಬಳಿ ಭಗವಾಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ೧೬ನೇ ಆರೋಪಿತರಾಗಿದ್ದಾರೆ. ನಿವೃತ್ತ ಯೋಧ ಆಸರಕೇರಿ ಶ್ರೀಕಾಂತ ನಾರಾಯಣ ನಾಯ್ಕ ಮೊದಲ ಆರೋಪಿಯಾಗಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 21 ಜನರ ಹೆಸರು ದೂರಿನಲ್ಲಿದೆ.
ಇದನ್ನೂ ಓದಿ : ಸಂಸದ ಹೆಗಡೆ ಸಹಿತ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲು
ಯಾರ್ಯಾರು ಆರೋಪಿತರು ?
ಶ್ರೀಕಾಂತ ನಾರಾಯಣ ನಾಯ್ಕ ಆಸರಕೇರಿ, ಗೋವಿಂದ ಜಟ್ಟ ನಾಯ್ಕ ಹನುಮಾನನಗರ, ರಾಘವೇಂದ್ರ ನಾಯ್ಕ ಮುಟ್ಟಳ್ಳಿ, ಶ್ರೀನಿವಾಸ ಮಾಸ್ತಪ್ಪ ನಾಯ್ಕ ಹನುಮಾನನಗರ, ವಿಜೇತ ರಾಧಾಕೃಷ್ಣ ಶೆಟ್ಟಿ ಹೆಬಳೆ, ಸುಬ್ರಾಯ ನಾಗಪ್ಪ ದೇವಡಿಗ ಹೆಬಳೆ, ತುಳಸಿದಾಸ ಸುಬ್ಬ ನಾಯ್ಕ ಬೆಳಕೆ, ತೆಂಗಿನಗುಂಡಿಯ ಗಣೇಶ ಮೊಗೇರ ಮತ್ತು ಕೇಶವ ದುರ್ಗಪ್ಪ ಮೊಗೇರ, ವೆಂಕಟೇಶ ನಾಯ್ಕ ಹೆಬಳೆ, ರಾಮ ನಾಯ್ಕ ಹೆಬಳೆ, ಸದಾನಂದ ಮೊಗೇರ ತೆಂಗಿನಗುಂಡಿ, ಕುಪ್ಪಯ್ಯ ಗೊಂಡ ತೆಂಗಿನಗುಂಡಿ, ದಯಾನಂದ ನಾಯ್ಕ ತೆಂಗಿನಗುಂಡಿ, ಸುರೇಶ ನಾಯ್ಕ ಮಣ್ಕುಳಿ, ಸಂಸದ ಅನಂತಕುಮಾರ ಹೆಗಡೆ, ದೀಪಕ ನಾಯ್ಕ ಹುರುಳಿಸಾಲ, ಪಾರ್ವತಿ ಎಸ್. ನಾಯ್ಕ ತೆಂಗಿನಗುಂಡಿ, ಚಂದ್ರು ಗೊಂಡ ಹೆಬಳೆ, ಕುಪ್ಪು ಗೊಂಡ ವರಕೋಡ್ಲು, ಯೋಗೇಶ ದೇವಜ್ಜಿ ಮೊಗೇರ ಹೆಬಳೆ ಮತ್ತು ಇತರರು.
ದೂರಿನಲ್ಲೇನಿದೆ?
ದಿನಾಂಕ: 21/1 / 2024 ರಂದು ತೆಂಗಿನಗುಂಡಿ ಬಂದರಿನಲ್ಲಿ ಹೆಬಳೆ ಪಂಚಾಯತಿ ವತಿಯಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಧ್ವಜದ ಕಟ್ಟೆಯನ್ನು ಕಟ್ಟಿದ್ದು, ಇದನ್ನು ದಿನಾಂಕ: 27/1 / 2024 ರಂದು ಪಂಚಾಯತಿಯಿಂದ ತೆರುವುಗೊಳಿಸಿದ್ದು ಇರುತ್ತದೆ. ಅದರ ನಂತರದಲ್ಲಿ ಆರೋಪಿತರು ದಿನಾಂಕ : 30/1 / 2024 ರಂದು ಪುನಃ ಅದೇ ಜಾಗದಲ್ಲಿ ಭಟ್ಕಳ ಇವರು ಹೆಬಳೆ ಪಂಚಾಯತಿಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಧ್ವಜದ ಕಟ್ಟೆಯನ್ನು ಕಟ್ಟಿರುತ್ತಾರೆ. ದಿನಾಂಕ : 4/3 / 2024 ರಂದು 13-00 ಗಂಟೆಯ ಸುಮಾರಿಗೆ ನಮೂದಾದ ಆರೋಪಿತರು ಅಕ್ರಮ ಗುಂಪನ್ನು ಕಟ್ಟಿಕೊಂಡು ಹೆಬಳೆ ಪಂಚಾಯತ ವ್ಯಾಪ್ತಿಯ ಜಮೀನಿನಲ್ಲಿ ಅನಧಿಕೃತ ಕಟ್ಟೆ ಕಟ್ಟಿರುವ ಸ್ಥಳದ ಸುತ್ತಮುತ್ತಲಿನಲ್ಲಿ ವಾಸವಾಗಿರುವ ಸಾರ್ವಜನಿಕರ ಧರ್ಮ, ಮತ ಮತ್ತು ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿ ಸೌಹಾರ್ದತೆ ಕದಡಿ ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡಿದ್ದಲ್ಲದೇ ಇದೇ ವೇಳೆಯಲ್ಲಿ ಸದ್ರಿ ಸ್ಥಳದಲ್ಲಿ ಹೆಬಳೆ ಪಂಚಾಯತಿಯಿಂದ ಯಾವುದೇ ಪರವಾನಿಗೆ ಪಡೆಯದೇ ತೆಂಗಿನಗುಂಡಿ ಬೀಚ್ ಎಂದು ಕರೆಯಲ್ಪಟ್ಟಿರುವ ಜಾಗಕ್ಕೆ ಆಪಾದಿತರು ಆಕ್ರಮವಾಗಿ ನಿರ್ಮಿಸಿದ ಅನಧಿಕೃತ ಕಟ್ಟೆಗೆ ವೀರ ಸಾವರಕರ್ ಎಂದು ನಾಮಫಲಕ ಅಳವಡಿಸಿ ಧ್ವಜಸ್ಥಂಭಕ್ಕೆ ಭಗವಾ ಧ್ವಜ ಅಳವಡಿಸಿ ಸುತ್ತ ಮುತ್ತಲಿನ ಪ್ರದೇಶದ ಸಾರ್ವಜನಿಕರ ಶಾಂತಿ ಕದಡಿ ಮತೀಯವಾಗಿ ಅತೀ ಸೂಕ್ಷಪ್ರದೇಶಕ್ಕೆ ಬಂದು ಈ ಕೃತ್ಯ ಮಾಡಿರುತ್ತಾರೆ. ಕಾರಣ ಮೇಲ್ಕಂಡ ಅಪಾದಿತರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನಿನಂತೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.