ಭಟ್ಕಳ : ಉತ್ತರ ಕನ್ನಡ ಸೇರಿದಂತೆ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟು ಶೀಘ್ರ ಶಮನಗೊಳ್ಳುವ ಲಕ್ಷಣ ಗೋಚರಿಸಿದೆ.
ಇದನ್ನೂ ಓದಿ : ಶಿವರಾತ್ರಿ ದಿನ ಭಟ್ಕಳದಿಂದ ಮುರ್ಡೇಶ್ವರಕ್ಕೆ ಪಾದಯಾತ್ರೆ
ಮಾ. 5 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಳಗಾವಿಗೆ ಆಗಮಿಸಲಿದ್ದು, ಖುದ್ದಾಗಿ ಈ ಮೂರು ಕ್ಷೇತ್ರಗಳಲ್ಲಿರುವ ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ. ತನ್ಮೂಲಕ ಬಿಜೆಪಿ ಹೈಕಮಾಂಡ್ ನೇರವಾಗಿ ಈಗ ತಲೆದೂರಿರುವ ಕಗ್ಗಂಟಿಗೆ ಪರಿಹಾರ ಒದಗಿಸಲಿದೆ.
ಈಗಾಗಲೇ ಈ ಮೂರು ಕ್ಷೇತ್ರಗಳಲ್ಲಿ ರಾಜ್ಯ ಬಿಜೆಪಿಯಿಂದ ನೇಮಿಸಿರುವ ವೀಕ್ಷಕರು ಪ್ರವಾಸ ಮಾಡುತ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷದ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಆರಂಭಿಸಿದ್ದಾರೆ. ಈ ವೀಕ್ಷಕರು ಕೂಡ ಬೆಳಗಾವಿಗೆ ಬರುವ ನಡ್ಡಾ ಅವರಿಗೆ ಮೌಖಿಕವಾಗಿ ವರದಿ ಒಪ್ಪಿಸಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ‘ಭಟ್ಕಳ ಡೈರಿ’ಗೆ ತಿಳಿಸಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತುಸು ಕಗ್ಗಂಟಾಗಿರುವುದಂತೂ ನಿಜ. ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಲಾ ಅಂಗಡಿ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಠಿಣ ಎಂಬಂತಿದೆ. ಅವರ ಪುತ್ರಿ ಶ್ರದ್ದಾ ಶೆಟ್ಟರ್ ಇಲ್ಲವೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಸಿಗುವ ಬಗ್ಗೆ ಚರ್ಚೆ ನಡೆದಿದೆ.
ಚಿಕ್ಕೋಡಿಯಲ್ಲೂ ಹಾಲಿ ಸಂಸದರಿಗೆ ಭಾರೀ ಪೈಪೋಟಿಯಿದೆ. ಕಳೆದ ಬಾರಿ ಟಿಕೆಟ್ ವಂಚಿತ, ಮಾಜಿ ಸಂಸದ ರಮೇಶ ಕತ್ತಿ ಈ ಬಾರಿ ತಮಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ರಾಜ್ಯಸಭೆಯ ಮಾಜಿ ಸದಸ್ಯ ಪ್ರಭಾಕರ ಕೋರೆ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನು, ಉತ್ತರ ಕನ್ನಡ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಕಳೆದ ಒಂದು ತಿಂಗಳಿನಿಂದ ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ. ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್ ಡೌಟ್ ಎಂಬ ಮಾತು ಜೋರಾಗಿ ಕೇಳಿಬಂದಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈಗಾಗಾಲೇ 17 ಜನರು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ಪತ್ರಕರ್ತ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಲೋಕಸಭಾ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ, ಶಿರಸಿಯ ಅನಂತಮೂರ್ತಿ ಹೆಗಡೆ, ಕಾರವಾರದ ವಕೀಲ ನಾಗರಾಜ ನಾಯಕ, ಭಟ್ಕಳ ಮಾಜಿ ಶಾಸಕ ಸುನೀಲ ನಾಯ್ಕ ಮತ್ತಿತರರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಹೀಗಾಗಿ, ಈ ಕ್ಷೇತ್ರದ ಬಗ್ಗೆಯೂ ನಡ್ಡಾ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.
.