ಭಟ್ಕಳ: ಖಾಸಗಿ ಬಸ್ ಪ್ರಯಾಣಿಕನ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಬಸ್ಸಿನಲ್ಲಿ ಯುವಕನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಬಸ್ ವ್ಯವಸ್ಥಾಪಕ ಮಂಗಳೂರಿನ ಮನೀಷ್ ತಂಜೀಮ್ ನಿಯೋಗದ ಮುಂದೆ ಸ್ಪಷ್ಟೀಕರಣ ನೀಡಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಮತ್ತು ಪ್ರಯಾಣಿಕರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾಗಿರುವ ಹೆಬಳೆ ಗ್ರಾ.ಪಂ.ನಿವಾಸಿ ಮುಜೀಬ್ ಮತ್ತವರ ಕುಟುಂಬ ಆರೋಪಿಸಿದ್ದರು. ಮಂಗಳೂರಿನಿಂದ ಹೈದರಾಬಾದಿಗೆ ತೆರಳುವ ಖಾಸಗಿ ಬಸ್ಸನ್ನು ಭಟ್ಕಳದಲ್ಲಿ ತಡೆಯಲು ಪ್ರಯತ್ನಿಸಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡದೆ ಬಸ್ಸನ್ನು ಸುರಕ್ಷಿತವಾಗಿ ಕಳುಹಿಸಿದ್ದರು.
ಇದನ್ನೂ ಓದಿ : ಪ್ರಯಾಣಿಕನ ಮೇಲೆ ತಂಡದಿಂದ ಹಲ್ಲೆ; ಬಸ್ ತಡೆದು ಕುಟುಂಬಸ್ಥರಿಂದ ಆಕ್ರೋಶ
ಇದೇ ಘಟನೆಗೆ ಸಂಬಂಧಿಸಿದಂತೆ ಆಕ್ರೋಶಿತ ಭಟ್ಕಳದ ಯುವಕರು ತಂಝೀಮ್ ಕಚೇರಿಗೆ ತೆರಳಿ ಘಟನೆಯ ಬಗ್ಗೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ದೂರಿದ್ದರು. ತಂಜೀಮ್ ನಿಯೋಗವು ರಾತ್ರಿ ಪೊಲೀಸ್ ಠಾಣೆಗೆ ತೆರಳಿ ಘಟನೆಯನ್ನು ವಿವರಿಸಿತ್ತು. ಪೊಲೀಸರು ಝೀರೋ ಪ್ರಕರಣ ದಾಖಲಿಸಿದ್ದು, ಘಟನೆ ನಡೆದ ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸುವುದಾಗಿ ತಿಳಿಸಿದ್ದರು. ಅದರಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ : ಜುಲೈ ೪ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಬುಧವಾರದಂದು ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿಯವರ ನೇತೃತ್ವದಲ್ಲಿ ಮಂಗಳೂರು ಖಾಸಗಿ ಬಸ್ ವ್ಯವಸ್ಥಾಪಕ ಮನೀಷ್ ಎಂಬುವವರನ್ನು ಕರೆಸಿ ಘಟನೆಯ ವಿವರವನ್ನು ಪಡೆದುಕೊಂಡಿತ್ತು.
ಇದನ್ನೂ ಓದಿ : ಹರೆರಾಮ ಡೆಂಗ್ಯೂ ಜ್ವರಕ್ಕೆ ಬಲಿ
ಬಸ್ ವ್ಯವಸ್ಥಾಪಕರು ಹೇಳಿದ್ದೇನು?
ಬಸ್ ವ್ಯವಸ್ಥಾಪಕರ ಪ್ರಕಾರ ಬಸ್ಸಿನಲ್ಲಿ ಯಾವುದೇ ಹಲ್ಲೆ ಆಗಲಿಲ್ಲ. ಯುವಕನೇ ಅಸಹಜವಾಗಿ ವರ್ತಿಸಿದ್ದ. ಜ್ವರ ಬಂದಿದೆ ಎಂದು ಹೇಳಿ ಜ್ವರ ಮಾತ್ರೆ ಪಡೆದುಕೊಂಡಿದ್ದ. ಅಲ್ಲದೆ ಪ್ರಯಾಣಿಕನೊಬ್ಬ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ನಾನು ಸೀಟಿನಲ್ಲಿ ಮಲಗಿಕೊಳ್ಳುವುದಿಲ್ಲ ಎಂದು ಹೇಳಿ ಚಾಲಕನ ಕ್ಯಾಬಿನ್ ನಲ್ಲಿ ಕುಳಿತುಕೊಂಡಿದ್ದಾನೆ. ಗಂಗಾವತಿ ಟೋಲ್ ಬಳಿ ಶೌಚಕ್ಕಾಗಿ ಬಸ್ ನಿಲ್ಲಿಸಿದಾಗ ಅಲ್ಲಿಂದ ಓಡಿಹೋಗಿದ್ದಾನೆ. ೨೫ ನಿಮಿಷ ಕಾದರೂ ಬರಲಿಲ್ಲ. ಮೊಬೈಲ್ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸಲಿಲ್ಲ. ಈ ವಿಷಯವನ್ನು ಯುವಕ ಟಿಕೆಟ್ ಬುಕ್ ಮಾಡಿದ ಏಜೆಂಟರಿಗೆ ತಿಳಿಸಿ ಅಲ್ಲಿಂದ ಬಸ್ಸನ್ನು ಬಿಡಲಾಯಿತು. ಅರ್ಧ ಗಂಟೆಯ ನಂತರ ಯುವಕನ ಮೊಬೈಲ್ ನಿಂದ ಕರೆ ಬಂದಿದೆ. ಯಾರೋ ಬೇರೆಯವರು ಮಾತನಾಡಿ ಈ ಯುವಕ ಯಾರು? ಇಲ್ಲಿನ ಮನೆಯೊಂದರ ಒಳಗೆ ಹೊಕ್ಕು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಹೇಳಿದ್ದಾರೆ. ಹಿಂದಿನಿಂದ ನನಗೆ ಹೊಡೆಯುತ್ತಿದ್ದಾರೆ ಎಂಬ ಯುವಕನ ದ್ವನಿ ಕೇಳಿ ಬರುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.
ಬಸ್ಸಿನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕುರಿತು ಕೇಳಿದಾಗ ಅದು ಹಾಳಾಗಿದೆ ಎಂಬ ಉತ್ತರ ನೀಡಿದ್ದಾರೆ.
ಒಟ್ಟಿನಲ್ಲಿ ಖಾಸಗಿ ಬಸ್ ಪ್ರಯಾಣಿಕನ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದಿದೆ. ಪೊಲೀಸರ ಸಮರ್ಪಕ ತನಿಖೆಯಿಂದಷ್ಟೆ ನಿಜ ಬಯಲಾಗಬೇಕಿದೆ.