ಭಟ್ಕಳ ಡೈರಿ‘ – 20 ವರ್ಷಗಳ ಹಿಂದೆ ಹುಟ್ಟಿದ ಕನಸಿನ ಯೋಜನೆಯಿದು. ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಬೇಕೆಂಬ ಉದ್ದೇಶದೊಂದಿಗೆ ಅಂದು ನನ್ನ ಸಂಪಾದಕತ್ವದಲ್ಲಿ ಆರಂಭಗೊಂಡ ದಿನಪತ್ರಿಕೆಯನ್ನು ಭಟ್ಕಳದ ಜನತೆ ತಮ್ಮದೇ ಪತ್ರಿಕೆಯೆಂದು ಸ್ವಾಗತಿಸಿ, ಹಾರೈಸಿ, ಬೆಳೆಸಿದರು. ಜನರ ತುಂಬು ಹೃದಯದ ಪ್ರೋತ್ಸಾಹದಿಂದ ಕೆಲವೇ ದಿನಗಳಲ್ಲಿ ಭಟ್ಕಳ ಡೈರಿ ಜನರ ಮನೆಮಾತಾಯಿತು. ಆದರೆ, ಕಾರಣಾಂತರದಿಂದ ಪತ್ರಿಕೆ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಯಿತು. ಭಟ್ಕಳದಲ್ಲಿ ಸುಮಾರು 8 ವರ್ಷಗಳ ಕಾಲ ಹೊಸದಿಗಂತ, ಉಷಾ ಕಿರಣ, ಧ್ಯೇಯನಿಷ್ಠ ಪತ್ರಕರ್ತ, ಜನಮಾಧ್ಯಮ ಮತ್ತಿತರ ಪತ್ರಿಕೆಗಳಲ್ಲಿ ಅರೆಕಾಲಿಕ ವರದಿಗಾರನಾಗಿ ಕಾರ್ಯನಿರ್ವಹಿಸಿದ ನಂತರ, ಪತ್ರಿಕಾ ಕ್ಷೇತ್ರದಲ್ಲಿ ಉದ್ಯೋಗ ಅರಸಿ ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಿದ್ದೇನೆ. ಕುಮಟಾದಲ್ಲಿ ಕನ್ನಡ ಜನಾಂತರಂಗ ಪತ್ರಿಕೆಯ ಉಪ ಸಂಪಾದಕನಾಗಿ ಉದ್ಯೋಗ ಆರಂಭಿಸಿ, ಸಂಪಾದಕನಾಗಿ ಬಡ್ತಿ ಪಡೆದೆ. ನಂತರ ಸಂಯುಕ್ತ ಕರ್ನಾಟಕದ ಜಿಲ್ಲಾ ವರದಿಗಾರನಾಗಿ ಕಾರವಾರದಲ್ಲಿ ಕೆಲಸ ನಿರ್ವಹಿಸಿದೆ. ವಿಜಯವಾಣಿಯ ಆರಂಭದಿಂದ ಹಿರಿಯ ವರದಿಗಾರನಾಗಿ ಹುಬ್ಬಳ್ಳಿಯಲ್ಲಿದ್ದು, ನಂತರ ಪದೋನ್ನತಿ ಹೊಂದಿ ಬೆಳಗಾವಿ ಬ್ಯೂರೋ ಮುಖ್ಯಸ್ಥನಾಗಿ ಹೊಸ ಜವಾಬ್ದಾರಿ ನಿರ್ವಹಿಸಿದೆ. ಸ್ವಲ್ಪ ಕಾಲ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿಯೂ ಕಾರ್ಯನಿರ್ವಹಿಸಿದ, ನಂತರ ವಿಜಯ ಕರ್ನಾಟಕ ಬಳಗಕ್ಕೆ ಶಿವಮೊಗ್ಗ ಸ್ಥಾನಿಕ ಸಂಪಾದಕನಾಗಿ ಸೇರ್ಪಡೆಗೊಂಡೆ. ಸುಮಾರು 23 ವರ್ಷಗಳ ಕಾಲ ಮುದ್ರಣ ಮಾಧ್ಯಮದಲ್ಲಿ ಅನುಭವ ಪಡೆದು, ಇಲೆಕ್ಟ್ರಾನಿಕ್ ಮಾಧ್ಯಮದ ಅನುಭವಕ್ಕಾಗಿ ನೂತನವಾಗಿ ಆರಂಭಗೊಂಡ ವಿಸ್ತಾರ ನ್ಯೂಸ್ ನ ಶಿವಮೊಗ್ಗ ಬ್ಯೂರೋ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದೆ. 25 ವರ್ಷಗಳ ಪಯಣದಲ್ಲಿ ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ ದಿನಪತ್ರಿಕೆ, ವಾರಪತ್ರಿಕೆ, ಡಿಜಿಟಲ್ ಮಾಧ್ಯಮ ಸೇರಿದಂತೆ ಒಂದೂವರೆ ವರ್ಷ ಇಲೆಕ್ಟ್ರಾನಿಕ್ ಮಾಧ್ಯಮದಲ್ಲೂ ಅ,ಆ,ಇ,ಈ….. ಕಲಿಯಲು ಪ್ರಯತ್ನಿಸಿದ್ದೇನೆ.

ಈ 25 ವರ್ಷ ಕಾಲ ಹೋದೆಡೆಯಲ್ಲೆಲ್ಲ ಭಟ್ಕಳ ಮಾತ್ರ ನೆನಪಾಗುತ್ತಲೇ ಇತ್ತು. ನನ್ನೂರು ಭಟ್ಕಳದಲ್ಲಿ ಮತ್ತೆ ಕೆಲಸ ಮಾಡಬೇಕು, ನನ್ನೂರಿನ ಋಣ ತೀರಿಸಬೇಕೆಂಬ ತುಡಿತ ಹೆಚ್ಚುತ್ತಲೇ ಇತ್ತು. ಅದಕ್ಕೀಗ ಕಾಲ ಒದಗಿಬಂದಿದೆ. ‘ಭಟ್ಕಳ ಡೈರಿ’ ಮತ್ತೆ ಆರಂಭವಾಗುತ್ತಿದೆ. ಆದರೆ, ಮುದ್ರಣ ರೂಪದಲ್ಲಿ ಅಲ್ಲ… ಇವತ್ತಿನ ಕಾಲಮಾನಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿ ಅಂಬೆಗಾಲಿಡಲು ಆರಂಭಿಸಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಯಿಂದ ‘ಭಟ್ಕಳ ಡೈರಿ’ ವಿಸ್ತಾರಗೊಳಿಸುವ ಆಶಯವೂ ಇದೆ.

ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ….

ವಿವೇಕ‌ ಮಹಾಲೆ
ಸಂಪಾದಕ, ಭಟ್ಕಳ ಡೈರಿ