ಭಟ್ಕಳ ಡೈರಿ ವರದಿ
ಹೊನ್ನಾವರ: ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ ಭಟ್ಕಳ ಮೂಲದ ಯುವಕನನ್ನು ಬಂಧಿಸಿರುವ ಹೊನ್ನಾವರ ಪೊಲೀಸರು, ಗಾಂಜಾ ಪೂರೈಸಿದ ಆರೋಪದಲ್ಲಿ ಭಟ್ಕಳಮೂಲದ ಇನ್ನೊಬ್ಬನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸೆ ೮ರಂದು ಮಧ್ಯಾಹ್ನ ಕಾಸರಕೋಡ ರೋಷನ್ ಮೊಹಲ್ಲಾದ ಶ್ಯಾನಭಾಗ ರೆಸಿಡೆನ್ಸಿ ಬಸ್ ತಂಗುದಾಣದ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ ಭಟ್ಕಳದ ಹೆಬಳೆ ಫಿರ್ದೋಸ ನಗರದ ಅಬ್ರಾರ್ ತಂದೆ ಮೋಹಿದ್ದಿನ್ ಶೇಖ್ (೨೪) ಎಂಬಾತನು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಹೊಂದಿದ್ದಾನೆಂಬ ಆರೋಪ ಕೇಳಿಬಂದಿದೆ. ದಾಳಿಯ ವೇಳೆ ಆತನ ಬಳಿಯಿಂದ ೧೧೨.೬೧ ಗ್ರಾಂ ಗಾಂಜಾ, ₹೧೬೦ ನಗದು ಹಾಗೂ ಕಪ್ಪು-ನೀಲಿ ಬಣ್ಣದ ಹ್ಯಾಂಡ್‌ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ ₹೫,೦೦೦ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಫೈಜಾನ್ ಎಂಬಾತ ಗಾಂಜಾವನ್ನು ಮಾರಾಟಕ್ಕಾಗಿ ನೀಡಿದ್ದಾಗಿ ಅಬ್ರಾರ್ ತಿಳಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಬ್ರಾರ್ ಹಾಗೂ ಫೈಜಾನ್ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಬ್ರಾರ್‌ನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಇದೇ ದಿನ ಸಂಜೆ ಕಾಸರಕೋಡ ಇಕೋ ಬೀಚ್ ಕ್ರಾಸ್ ಸಮೀಪ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಡಿ ಭಟ್ಕಳದ ಹೆಬಳೆ ಫಿರ್ದೋಸ ನಗರದ ಸೈಯದ್ ಹುಸೇನ್ ತಂದೆ ಸೈಯದ್ ರೆಹಮತುಲ್ಲಾ (೨೨) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗಾಂಜಾ ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಪಿಎಸ್ ಕಾಯ್ದೆಯ ಕಲಂ ೨೭(ಬಿ) ಅಡಿಯಲ್ಲಿ ಕ್ರಮ ಕೈಗೊಳ್ಳಲು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎರಡೂ ಪ್ರಕರಣಗಳಲ್ಲಿ ಹೊನ್ನಾವರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಮಂಜುನಾಥ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ :
ಭಟ್ಕಳದ ಎಐಟಿಎಂನಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತು ರಾಷ್ಟ್ರೀಯ ಮಟ್ಟದ ಆನ್‌ಲೈನ್ ಕಾರ್ಯಾಗಾರ
ಬೆಳಕೆ ಗ್ರಾ ಪಂ.ಗೆ ಸಾಮಾಜಿಕ ಪರಿಶೋಧನಾ ನಿರ್ದೇಶಕರ ಭೇಟಿ; ಪ್ರಗತಿ ಪರಿಶೀಲನೆ
