ಭಟ್ಕಳ ಡೈರಿ ವರದಿ
ಭಟ್ಕಳ: ಸಾಮಾನ್ಯವಾಗಿ ಮನೆ ನಿರ್ಮಾಣಕ್ಕೆ ವರ್ಷಗಳ ಕಾಲ ಬೇಕಾಗುತ್ತದೆ. ಆದರೆ ಈಗಾಗಲೇ ನಿರ್ಮಾಣಗೊಂಡಿರುವ ಮನೆಯನ್ನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದೇ? ಹೌದು ಅನ್ನುತ್ತಾರೆ ಭಟ್ಕಳದ ಆನಂದ ಆಚಾರಿ. ಅವರ ಈ ಅಪರೂಪದ ಪ್ರಯತ್ನ ಸಾರ್ವಜನಿಕರ ಗಮನ ಸೆಳೆದಿದೆ.
ಹಳೆಯ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸುವ ಬದಲು, ಕಟ್ಟಡದ ರಚನೆಯನ್ನು ಸುರಕ್ಷಿತವಾಗಿ ಉಳಿಸಿಕೊಂಡು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ತಂತ್ರವನ್ನು ಇಲ್ಲಿ ಬಳಸಲಾಗುತ್ತದೆ. ಕಟ್ಟಡ ಸ್ಥಳಾಂತರಿಸುವ ಮೊದಲು ಅದರ ಅಡಿಪಾಯ, ಗೋಡೆಗಳು, ಮೇಲ್ಛಾವಣಿ ಹಾಗೂ ಕಟ್ಟಡದ ಒಟ್ಟಾರೆ ಬಲವನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತದೆ. ನಂತರ ಕಟ್ಟಡವನ್ನು ಅಗತ್ಯವಿರುವ ರೀತಿಯಲ್ಲಿ ಸಿದ್ಧಪಡಿಸಿ, ವಿಶೇಷ ಉಪಕರಣಗಳು ಹಾಗೂ ಜಾಕ್ಗಳ ಸಹಾಯದಿಂದ ನಿಧಾನವಾಗಿ ಮೇಲಕ್ಕೆತ್ತಲಾಗುತ್ತದೆ. ಬಳಿಕ ವಿಶೇಷ ವ್ಯವಸ್ಥೆಯ ಮೂಲಕ ಕಟ್ಟಡವನ್ನು ನಿಗದಿತ ದಿಕ್ಕಿನಲ್ಲಿ ಸಾಗಿಸಿ ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಟ್ಟಡಕ್ಕೆ ಹಾನಿಯಾಗದಂತೆ ಪ್ರತಿಯೊಂದು ಹಂತದಲ್ಲೂ ತಾಂತ್ರಿಕ ನಿಗಾ ವಹಿಸಲಾಗುತ್ತದೆ.
ಕಟ್ಟಡ ಸ್ಥಳಾಂತರಿಸುವ ವಿಧಾನವು ಸಮಯ, ವೆಚ್ಚ ಹಾಗೂ ಕಟ್ಟಡದ ವಿನ್ಯಾಸಕ್ಕೆ ಅನುಗುಣವಾಗಿ ಬದಲಾಗುತ್ತದೆ. ವಿಶೇಷವಾಗಿ ಉತ್ತಮ ಸ್ಥಿತಿಯಲ್ಲಿರುವ ಹಳೆಯ ಕಟ್ಟಡಗಳನ್ನು ಉಳಿಸಿಕೊಳ್ಳಲು ಇಂತಹ ತಂತ್ರಜ್ಞಾನ ಸಹಕಾರಿಯಾಗಬಹುದು. ಯಾವುದೇ ವಿಧದ ಕಟ್ಟಡವನ್ನು ಸ್ಥಳಾಂತರ ಮಾಡಲು ಸಾಧ್ಯ ಎನ್ನುತ್ತಾರೆ ಆನಂದ ಆಚಾರಿ.
ಮನೆಯನ್ನೇ ಸ್ಥಳಾಂತರಿಸುವ ಈ ಅಪರೂಪದ ವಿಧಾನವು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಹೊಸ ಸಾಧ್ಯತೆಗಳ ಕುರಿತು ಚರ್ಚೆಗೆ ಕಾರಣವಾಗಿದೆ. ಭಟ್ಕಳ ತಾಲೂಕಿನ ಶಿರಾಲಿ ಮಾವಿನಕಟ್ಟೆಯ ಆನಂದ ಆಚಾರ್ಯ ಅವರು ಈ ಸಾಹಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.
ಹತ್ತು ವರ್ಷಗಳ ಹಿಂದೆ ಬೇಂಗ್ರೆ ಬಂಗಾರಮಕ್ಕಿಯಲ್ಲಿರುವ ತಮ್ಮ ಸ್ವಂತ ಹಳೆಯ ಮನೆಯನ್ನು ಸ್ಥಳಾಂತರ ಮಾಡಿಸಲಾಗಿತ್ತು. ಅದರ ಪ್ರೇರಣೆಯಿಂದ ಆನಂದ ಆಚಾರಿ ಜೋಗದಲ್ಲಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಕಟ್ಟಡಗಳ ಭಾಗಶಃ ಕೆಡುವ ಕಾಮಗಾರಿಯನ್ನೂ ಮಾಡುವ ಇವರು, ಈಗಾಗಲೇ ಭಟ್ಕಳದಿಂದ ಮಿರ್ಜಾನವರೆಗೆ ಚತುಷ್ಪತ ಕಾಮಗಾರಿ ಹಿನ್ನೆಲೆ ಇಂತಹ ಕಾಮಗಾರಿಗಳನ್ನು ಮಾಡಿದ್ದಾರೆ.
ಭಟ್ಕಳ ತಾಲೂಕಿನ ಬೇಂಗ್ರೆ ಮಾವಿನಕಟ್ಟೆಯಲ್ಲಿ ಇವರದ್ದೇ ಆದ ವುಡ್ ಎಂಡ್ ಫರ್ನಿಚರ್ ಇಂಡಸ್ಟ್ರಿ ಇದ್ದು ಅದರ ಅಡಿಯಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಮಾಡುತ್ತಿದ್ದಾರೆ. ಆನಂದ ಆಚಾರ್ಯರ ಸಂಪರ್ಕ ಸಂಖ್ಯೆ: 9902607456, 7019925435
ಇದನ್ನೂ ಓದಿ:
ಭಟ್ಕಳ ಖೋಖೋ ಕ್ರೀಡಾಕೂಟ: ಹೊನ್ನೆಮಡಿ ಶಾಲೆಗೆ ಬಾಲಕ-ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ
ಭಟ್ಕಳದ ನೆಲದ ಹೆಮ್ಮೆಯ ಅನಂತನಾಗ ಅವರ ಅಪೂರ್ವ ಕಲಾಯಾನ


