ಭಟ್ಕಳ ಡೈರಿ ವರದಿ

ಭಟ್ಕಳ: ಗಣೇಶೋತ್ಸವ ಪೆಂಡಾಲ್ ಮೇಲೆ ಕಲ್ಲು ಎಸೆದಿರುವ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕ-ಮಾಲಕರ ಸಂಘ ತುರ್ತು ಪತ್ರಿಕಾಗೋಷ್ಠಿ ನಡೆಸಿ ಘಟನೆ ಕುರಿತು ಸ್ಪಷ್ಟನೆ ನೀಡಿದೆ. ಗಣೇಶೋತ್ಸವ ಪೆಂಡಾಲ್‌ನ ಹಿಂಭಾಗದ ಶೆಡ್ ಮೇಲೆ ಬೆಳಗ್ಗೆ ಸುಮಾರು ೭.೨೦ರ ವೇಳೆಗೆ ಕಲ್ಲು ಬಿದ್ದಿರುವುದು ನಿಜ ಎಂದು ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ತಿಳಿಸಿದ್ದಾರೆ.

ಪೆಂಡಾಲ್ ಮೇಲೆ ಬಿದ್ದಿರುವುದು ಕಲ್ಲಲ್ಲ… ಬಾಲ್ ಎಂಬ ಮಾತು ಕೇಳಿ ಬಂದಿತ್ತು. ಆದರೆ, ‘ಬಾಲ್ ಬಿದ್ದಿದೆ’ ಎಂಬ ಆರೋಪವನ್ನು ಸಂಘದ ಅಧ್ಯಕ್ಷರು ತಳ್ಳಿಹಾಕಿದ್ದು, ಪೆಂಡಾಲ್ ಮೇಲೆ ಕಲ್ಲು ಬಿದ್ದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಲ್ಲು ಎಲ್ಲಿಂದ ಬಂತು ಹಾಗೂ ಯಾರು ಎಸೆದರು ಎಂಬುದು ಸದ್ಯಕ್ಕೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ತಕ್ಷಣವೇ ಭಟ್ಕಳ ಶಹರ ಪೊಲೀಸ್ ಠಾಣೆಯ ಪಿಐ ದಿವಾಕರ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ವೆಂಕಟೇಶ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಘಟನೆಯ ಸತ್ಯಾಸತ್ಯತೆ ಪತ್ತೆಹಚ್ಚಲು ಪೆಂಡಾಲ್‌ನ ಹಿಂಭಾಗದಲ್ಲಿರುವ ಅಂಜುಮಾನ್ ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಸಂಘದ ವತಿಯಿಂದ ಪೊಲೀಸರಿಗೆ ಮನವಿ ಮಾಡಲಾಗಿದೆ.

ಗಣೇಶ ವಿಸರ್ಜನೆ ಇಲ್ಲ :

ಈ ನಡುವೆ ಕಲ್ಲು ಎಸೆತ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವವರೆಗೆ ಗಣೇಶ ವಿಸರ್ಜನೆ ಮಾಡದಿರಲು ಆಟೋ ಚಾಲಕ-ಮಾಲಕರ ಸಂಘ ನಿರ್ಧರಿಸಿದೆ ಎಂದು ತಿಳಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಿದ ಬಳಿಕವೇ ಗಣೇಶ ವಿಸರ್ಜನೆ ನಡೆಸಲಾಗುವುದು ಎಂದು ಸಂಘಟನೆ ತಿಳಿಸಿದೆ. ಈ ನಿರ್ಧಾರಕ್ಕೆ ಉಳಿದ ಮೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಸಹಮತ ವ್ಯಕ್ತಪಡಿಸಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಇದನ್ನೂ ಓದಿ:

ಭಟ್ಕಳದಲ್ಲಿ ಮತ್ತೆ ಕಲ್ಲು ತೂರಾಟ: ಗಣೇಶ ಪೆಂಡಾಲ್ ಮೇಲೆ ಕಲ್ಲು ಎಸೆತ

ಭಟ್ಕಳದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಘಟನಾ ಸ್ಥಳಕ್ಕೆ ಡಿಐಜಿ ಭೇಟಿ

ಭಟ್ಕಳ ಕಲ್ಲು ತೂರಾಟ ಪ್ರಕರಣ: ಜೀವನ ನಾಯ್ಕ, ದೇವರಾಜ ನಾಯ್ಕಗೆ ಜಾಮೀನು

ಹಿಂದೂ ಯುವಕರ ಬಂಧನ: ಭಟ್ಕಳ ಶಹರ ಠಾಣೆಗೆ ಮುತ್ತಿಗೆ

ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ದೂರು-ಪ್ರತಿ ದೂರು ದಾಖಲು