ಭಟ್ಕಳ ಡೈರಿ ವರದಿ

ಭಟ್ಕಳ: ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ಕೃತ್ಯಗಳ ನಿಯಂತ್ರಣದ ದೃಷ್ಟಿಯಿಂದ ಮೂಡುಭಟ್ಕಳ–ಮುಟ್ಟಳ್ಳಿ ಭಾಗದ ಮೂರು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಸಮಾಜಮುಖಿ ಕಾರ್ಯ ಕೈಗೊಂಡಿದೆ.

ಮೂಡುಭಟ್ಕಳ ಬೈಪಾಸ್, ಮೂಡುಭಟ್ಕಳ ಹೆಬ್ಬಾಗಿಲು ಕ್ರಾಸ್ ಹಾಗೂ ಮುಟ್ಟಳ್ಳಿ ರೈಲ್ವೆ ಸ್ಟೇಷನ್ ಕ್ರಾಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಗರ ಠಾಣೆ ಪಿಎಸೈ ನವೀನ ನಾಯ್ಕ ಅವರು ವ್ಯವಸ್ಥೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ನವೀನ ನಾಯ್ಕ, ಸಂಘದ ಸದಸ್ಯರು ಕೈಗೊಂಡಿರುವ ಈ ಸಮಾಜಮುಖಿ ಕಾರ್ಯ ಇತರರಿಗೂ ಮಾದರಿಯಾಗಬೇಕು ಎಂದರು.

ಅಪರಾಧ ಪ್ರಕರಣಗಳ ತನಿಖೆಗೆ ಸಿಸಿಟಿವಿ ದೃಶ್ಯಾವಳಿಗಳು ಪ್ರಮುಖ ಸಾಕ್ಷ್ಯವಾಗುತ್ತವೆ. ಘಟನೆ ನಡೆದ ಸಂದರ್ಭದಲ್ಲಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಗಳ ಪತ್ತೆ ಹಾಗೂ ಪ್ರಕರಣದ ತನಿಖೆಗೆ ಅವುಗಳನ್ನು ಬಳಸಿಕೊಳ್ಳಲಾಗುತ್ತದೆ. ಪ್ರಮುಖ ಸ್ಥಳಗಳಲ್ಲಿ ನಿಗಾ ಇರುವುದರಿಂದ ಅಪರಾಧ ಕೃತ್ಯಗಳನ್ನು ತಡೆಯುವಲ್ಲಿಯೂ ಸಹಕಾರಿಯಾಗಲಿದೆ. ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಯುವಕರ ತಂಡ ಸಮಾಜಮುಖಿ ಕಾರ್ಯ ಕೈಗೊಂಡಿರುವುದು ಸಂತಸದ ಸಂಗತಿ ಎಂದು ನವೀನ ನಾಯ್ಕ ಹೇಳಿದರು.

ಊರಿನ ಪ್ರಮುಖ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀನಿವಾಸ ನಾಯ್ಕ ಮಾತನಾಡಿ, ಮೂಡುಭಟ್ಕಳ–ಮುಟ್ಟಳ್ಳಿ ಪ್ರದೇಶವು ಭಟ್ಕಳ ನಗರಕ್ಕೆ ಸಮೀಪದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ನಿಲ್ದಾಣವೂ ಹತ್ತಿರದಲ್ಲಿದೆ. ರಾತ್ರಿ ವೇಳೆ ಅಪರಿಚಿತರ ಓಡಾಟ, ಕಳ್ಳತನ ಸೇರಿದಂತೆ ವಿವಿಧ ಘಟನೆಗಳ ಮೇಲೆ ನಿಗಾ ಇಡಲು ಸಿಸಿಟಿವಿ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗೋ ಕಳ್ಳತನದಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿರುವುದು ಅಪರಾಧ ತಡೆಗೆ ನೆರವಾಗಲಿದೆ. ಸಮಾಜಮುಖಿ ಕಾರ್ಯ ಕೈಗೊಳ್ಳಲು ಕೇವಲ ಹಣವಿದ್ದರೆ ಸಾಲದು. ಊರಿನ ಬಗ್ಗೆ ಕಾಳಜಿ ಹಾಗೂ ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ಮನಸ್ಸು ಇರಬೇಕು. ಆ ಮನೋಭಾವವನ್ನು ಕ್ರಿಯೇಟಿವ್ ಫ್ರೆಂಡ್ಸ್ ತಂಡ ತೋರಿಸಿಕೊಟ್ಟಿದೆ ಎಂದು ಶ್ರೀನಿವಾಸ ನಾಯ್ಕ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸರಿಗೆ ಮೇಲ್ವಿಚಾರಣೆ ಜವಾಬ್ದಾರಿ:

ಮೂಡುಭಟ್ಕಳ ಬೈಪಾಸ್, ಮೂಡುಭಟ್ಕಳ ಹೆಬ್ಬಾಗಿಲು ಕ್ರಾಸ್ ಹಾಗೂ ಮುಟ್ಟಳ್ಳಿ ರೈಲ್ವೆ ಸ್ಟೇಷನ್ ಕ್ರಾಸ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗಿದೆ.

ಯುವಕರ ಕಾರ್ಯಕ್ಕೆ ಮೆಚ್ಚುಗೆ: ಸ್ಥಳೀಯ ಯುವಕರು ಹಾಗೂ ಸಂಘದ ಸದಸ್ಯರು ಒಗ್ಗೂಡಿ ತಮ್ಮ ಪ್ರದೇಶದ ಸುರಕ್ಷತೆಗಾಗಿ ಕೈಗೊಂಡಿರುವ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಇಂತಹ ಸಿಸಿಟಿವಿ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಫ್ರೆಂಡ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹೇಶ ನಾಯ್ಕ, ಉಪಾಧ್ಯಕ್ಷ ಮಾತೇಶ ನಾಯ್ಕ, ಕಾರ್ಯದರ್ಶಿ ಮೋಹನ ನಾಯ್ಕ, ಸದಸ್ಯರಾದ ಕುಮಾರ ನಾಯ್ಕ, ಶಿವರಾಮ ನಾಯ್ಕ, ದನುಷ ನಾಯ್ಕ, ಊರಿನ ಪ್ರಮುಖರಾದ ಗಣೇಶ ನಾಯ್ಕ, ಶೇಷಗಿರಿ ನಾಯ್ಕ, ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ ಸೇರಿದಂತೆ ಸಂಘದ ಸದಸ್ಯರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ: 

ಭಟ್ಕಳದಲ್ಲಿ ಜಲ ಸಂವರ್ಧನೆಗೆ ಶ್ರಮದಾನ: ಮುಂಚಿತವಾಗಿಯೇ ನದಿ ಕಟ್ಟು ನಿರ್ಮಾಣ

ಸಂಪಾದಕೀಯ: ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ

ಭಟ್ಕಳದಲ್ಲಿ ಕಳೆದೊಂದು ವಾರ: ಕಲ್ಲು ತೂರಾಟದಿಂದ ಪೊಲೀಸ್ ಬಂದೋಬಸ್ತ್‌ವರೆಗೆ ಏನಾಯಿತು?