ಭಟ್ಕಳ ಡೈರಿ ವರದಿ

ಭಟ್ಕಳ: ತಾಲೂಕಿನ ವೆಂಕಟಾಪುರ ಗ್ರಾಮೀಣ ಭಾಗದ ಸರ್ವೇ ನಂ. ೨೭೦ರಲ್ಲಿ ನಡೆಯುತ್ತಿದೆ ಎನ್ನಲಾದ ರಸ್ತೆ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಹಾಡಿ ಜಾಗ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವಂತೆ ಆಗ್ರಹಿಸಿ ಶ್ರೀ ಮಾಸ್ತಪ್ಪ ನಾಯ್ಕ್ ಬಲಸೆ ಅವರ ಅಭಿಮಾನಿಗಳು ಸಹಾಯಕ ಕಮೀಷನರ್ ಜಿ. ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.

ವೆಂಕಟಾಪುರ ಭಾಗದಲ್ಲಿ ಈಗಾಗಲೇ ಜನರ ಸಂಚಾರಕ್ಕೆ ರಸ್ತೆ ಸಂಪರ್ಕವಿದೆ. ಹೀಗಿರುವಾಗ ಕಾಡು ಹಾಗೂ ಹಾಡಿ ಪ್ರದೇಶವನ್ನು ತೆರವುಗೊಳಿಸಿ ಮತ್ತೆ ಹೊಸ ರಸ್ತೆ ನಿರ್ಮಿಸುವ ಅಗತ್ಯವೇನು ಎಂದು ಮನವಿ ಸಲ್ಲಿಸಿದವರು ಪ್ರಶ್ನಿಸಿದರು. ಹಾಡಿ ಜಾಗವನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಬಡ ಹಾಗೂ ಸಾಮಾನ್ಯ ಕುಟುಂಬಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವತ್ತ ಆಡಳಿತ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕುಡಿಯುವ ನೀರು, ಉತ್ತಮ ರಸ್ತೆ, ವಿದ್ಯುತ್, ಚರಂಡಿ ವ್ಯವಸ್ಥೆ ಹಾಗೂ ಆರೋಗ್ಯ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಅರಣ್ಯ ಅಥವಾ ಹಾಡಿ ಜಾಗದಲ್ಲಿ ಒತ್ತುವರಿ ಹಾಗೂ ಕಾಮಗಾರಿಗಳಿಗೆ ಪ್ರಭಾವಿಗಳ ಒತ್ತಡದ ಮೇರೆಗೆ ಅವಕಾಶ ನೀಡಲಾಗುತ್ತಿದೆ ಎಂಬ ಸಾರ್ವಜನಿಕರಲ್ಲಿರುವ ಅನುಮಾನವನ್ನು ಅಧಿಕಾರಿಗಳು ನಿವಾರಿಸಬೇಕು ಎಂದು ಮನವಿ ಸಲ್ಲಿಸಿದವರು ತಿಳಿಸಿದ್ದಾರೆ.

ಸರ್ವೇ ನಂ. ೨೭೦ರ ದಾಖಲೆಗಳು, ಜಾಗದ ಸ್ವರೂಪ, ರಸ್ತೆ ನಿರ್ಮಾಣಕ್ಕೆ ಪಡೆದಿರುವ ಅನುಮತಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಪರವಾನಗಿಗಳನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು. ನಿಯಮಬಾಹಿರವಾಗಿ ಕಾಮಗಾರಿ ನಡೆಯುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

‘ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಹಾಗೂ ಹಾಡಿ ಪ್ರದೇಶ ನಾಶಪಡಿಸುವ ಬದಲು ಈಗಿರುವ ರಸ್ತೆ ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಬೇಕು. ನೈಸರ್ಗಿಕ ಸಂಪತ್ತಿನ ಜತೆಗೆ ಹಾಡಿ ಜಾಗವನ್ನು ಅವಲಂಬಿಸಿರುವ ಬಡ ಕುಟುಂಬಗಳ ಜೀವನೋಪಾಯವನ್ನೂ ರಕ್ಷಿಸಬೇಕು’ ಎಂದು ಮನವಿ ಸಲ್ಲಿಸಿದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಶೋಕ ನಾಯ್ಕ, ಕೃಷ್ಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಸ್ಕೂಟಿಯಲ್ಲಿ ಗಾಂಜಾ ಸಂಗ್ರಹ; ಭಟ್ಕಳ ಗ್ರಾಮೀಣ ಪೊಲೀಸರ ದಾಳಿ

ಮುಟ್ಟಳ್ಳಿಯಲ್ಲಿ ಬಿಜೆಪಿಯಿಂದ ‘ನಮ್ಮ ಮನೆ–ನಮ್ಮ ಹಕ್ಕು’ ಜನಾಂದೋಲನ