ಭಟ್ಕಳ ಡೈರಿ ವರದಿ
ಮುರ್ಡೇಶ್ವರ: ಕೆಲಸಕ್ಕೆ ತೆರಳಲಾಗದೆ ಮಾನಸಿಕವಾಗಿ ನೊಂದಿದ್ದ ವ್ಯಕ್ತಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಸಣಭಾವಿ ಬೆಂಗ್ರೆ-೦೧ ನಿವಾಸಿ ಡ್ಯಾನಿ ತಂದೆ ಜೋನ್ ಲೂಯಿಸ್ (೪೩) ಮೃತ ವ್ಯಕ್ತಿ.
ಡ್ಯಾನಿ ಅವರು ಗೌಂಡಿ ಕೆಲಸ ಮಾಡಿಕೊಂಡಿದ್ದು, ಇತ್ತೀಚೆಗೆ ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಇರುತ್ತಿದ್ದರು. ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಸೊಂಟ ನೋವಿನಿಂದಲೂ ಬಳಲುತ್ತಿದ್ದರು. ಕೆಲಸಕ್ಕೆ ತೆರಳಲು ಸಾಧ್ಯವಾಗದಿರುವುದನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ ೨೭ರಂದು ಮಧ್ಯಾಹ್ನ ೧೨ರಿಂದ ೧೨.೩೦ರ ನಡುವಿನ ಅವಧಿಯಲ್ಲಿ ಮನೆಯ ಕೊಣೆಯ ಮೇಲ್ಚಾವಣಿಯ ಪಕಾಸಿಗೆ ನೈಲಾನ್ ಹಗ್ಗ ಬಳಸಿ ಕುತ್ತಿಗೆಗೆ ಉರುಳು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೃತರ ಸಹೋದರಿ ಸೇಲಿನ್ ಕೋಂ ಲುದ್ರಿಂಗ್ ಜೇಮ್ಸ್ (೪೫) ಅವರು ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ




