ಭಟ್ಕಳ ಡೈರಿ ವರದಿ

ಭಟ್ಕಳ: ನಗರದ ಆಸರಕೇರಿ ಪ್ರದೇಶದಲ್ಲಿ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ಸ್ಥಳೀಯರಿಗೆ ಹಲವು ವರ್ಷಗಳಿಂದ ಸಂಕಷ್ಟ ತಂದೊಡ್ಡಿದೆ. ಒಳಚರಂಡಿ ನೀರು ಸರಾಗವಾಗಿ ಹರಿದುಹೋಗದೆ ಸಂಗ್ರಹವಾಗುತ್ತಿದ್ದು, ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳಿಗೂ ಕಲುಷಿತ ನೀರು ಸೇರುವ ಆತಂಕ ಎದುರಾಗಿದೆ. ಕಳೆದ ಐದಾರು ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಬಂದರು ರಸ್ತೆಯ ಎತ್ತರ ಪ್ರದೇಶದಿಂದ ಹರಿದುಬರುವ ಒಳಚರಂಡಿ ನೀರನ್ನು ಸೋನಾರಕೇರಿ ಮಾರ್ಗವಾಗಿ ಆಸರಕೇರಿಯತ್ತ ಹರಿಸಲಾಗುತ್ತಿದೆ. ಆದರೆ, ನೀರು ಸರಾಗವಾಗಿ ಸಾಗಲು ಅಗತ್ಯ ವ್ಯವಸ್ಥೆ ಇಲ್ಲದಿರುವುದರಿಂದ ಗಟಾರದಲ್ಲೇ ಕೊಳಚೆ ನೀರು ನಿಂತುಕೊಳ್ಳುತ್ತಿದೆ. ಪ್ರಸ್ತುತ ಗಟಾರದಲ್ಲಿ ಕೊಳಚೆ ನೀರು ಒಣಗಿ ಪಾಚಿ ಬೆಳೆದಿದೆ. ಮಳೆ ಬಂದಾಗ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆ ನಿಂತಿರುವ ಈ ಸಮಯದಲ್ಲಿ ಕಾಮಗಾರಿ ಕೈಗೊಳ್ಳಲು ಸೂಕ್ತ ಅವಕಾಶವಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ನಿವಾಸಿಗಳ ಒತ್ತಾಯವಾಗಿದೆ. ಒಳಚರಂಡಿ ನೀರಿನ ಮಾರ್ಗವನ್ನು ತಾಂತ್ರಿಕವಾಗಿ ಪರಿಶೀಲಿಸಿ ಬದಲಾಯಿಸಬೇಕು. ಮುಖ್ಯ ರಸ್ತೆಯ ಒಳಚರಂಡಿ ವ್ಯವಸ್ಥೆಗೆ ಸೂಕ್ತ ಸಂಪರ್ಕ ಕಲ್ಪಿಸುವುದರ ಜೊತೆಗೆ ಆಸರಕೇರಿ ಭಾಗದಲ್ಲಿ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಅದರೊಂದಿಗೆ, ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳ ಗುಣಮಟ್ಟವನ್ನು ಪರಿಶೀಲಿಸಿ, ನೀರು ಕಲುಷಿತಗೊಂಡಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಹಿಂದೆ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎನ್ನಲಾಗಿದೆ. ಕಳೆದ ವಾರ ಸ್ಥಳೀಯರು ನಗರಸಭೆಗೆ ಮನವಿ ಸಲ್ಲಿಸಿದ್ದು, ನವೆಂಬರ್ ೫ರೊಳಗೆ ಸಮಸ್ಯೆ ಪರಿಹರಿಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಶ್ರೀಧರ ನಾಯ್ಕ ತಿಳಿಸಿದ್ದಾರೆ.

ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ. ನಗರಸಭೆ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಆಸರಕೇರಿಯ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಮುರ್ಡೇಶ್ವರದಲ್ಲಿ ಮನಕಲಕುವ ಘಟನೆ: ೪೩ ವರ್ಷದ ವ್ಯಕ್ತಿ ಆತ್ಮಹತ್ಯೆ

ವಿರುದ್ಧ ದಿಕ್ಕಿನಲ್ಲಿ ಬೈಕ್ ಚಲಾಯಿಸಿ ಭಟ್ಕಳದ ಕಾರಿಗೆ ಡಿಕ್ಕಿ; ಸವಾರನಿಗೂ ಗಾಯ