ಭಟ್ಕಳ ಡೈರಿ ವರದಿ
ಭಟ್ಕಳ: ರಸ್ತೆಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಹಿಂಬದಿ ಸವಾರನ ಕಾಲಿಗೆ ಗಾಯವಾದ ಘಟನೆ ಭಟ್ಕಳ–ಹೊನ್ನಾವರ ರಾಷ್ಟ್ರೀಯ ಹೆದ್ದಾರಿ-೬೬ರ ತೆರ್ನಮಕ್ಕಿ ಸಭಾತಿ ಕ್ರಾಸ್ ಸಮೀಪ ನಡೆದಿದೆ. ಘಟನೆ ನವೆಂಬರ್ ೮ರಂದು ಸಂಜೆ ಸುಮಾರು ೬:೪೫ರ ವೇಳೆಗೆ ನಡೆದಿದೆ ಎಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪ್ರಕಾರ, ಕುಮಾರ ದುರ್ಗಯ್ಯ ದೇವಡಿಗ (೩೨) ಎಂಬವರು ಕೆಎ-೪೭-ಯು-೦೪೦೪ ನೋಂದಣಿಯ ಮೋಟಾರ್ ಸೈಕಲ್ನಲ್ಲಿ ಲೋಕೇಶ ಮಂಜುನಾಥ ದೇವಡಿಗ (೨೮) ಅವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಮಾವಿನಕಟ್ಟೆ ಕಡೆಯಿಂದ ಮುರುಡೇಶ್ವರದತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ತೆರ್ನಮಕ್ಕಿ ಸಭಾತಿ ಕ್ರಾಸ್ ಸಮೀಪ ರಸ್ತೆಗೆ ಏಕಾಏಕಿ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಸವಾರರು ಒಮ್ಮೆಲೆ ಬ್ರೇಕ್ ಹಾಕಿದ್ದಾರೆ. ಪರಿಣಾಮ ಬೈಕ್ ಸ್ಕಿಡ್ ಆಗಿ ಬಲಭಾಗಕ್ಕೆ ಉರುಳಿಬಿದ್ದಿದೆ. ಅಪಘಾತದಲ್ಲಿ ಹಿಂಬದಿ ಸವಾರ ಲೋಕೇಶ ಅವರ ಬಲಗಾಲಿನ ಮೊಣಕಾಲಿಗೆ ಗಾಯವಾಗಿದ್ದು, ನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಗಾಯಾಳುವಿನ ಸಹೋದರ ನಾಗರಾಜ ಮಂಜುನಾಥ ದೇವಡಿಗ ಅವರು ನವೆಂಬರ್ ೧೧ರಂದು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಬೈಕ್ ಸವಾರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ :
ಭಟ್ಕಳದ ಶಿಕ್ಷಣ ಅಭಿವೃದ್ಧಿಗೆ ಕೈಜೋಡಿಸಿದ ಕೊಂಕಣ ಖಾರ್ವಿ ಸಮಾಜ
ಚಿನ್ನಾಭರಣ ನಾಪತ್ತೆಯಿಂದ ಮನನೊಂದು ನದಿಗೆ ಹಾರಿದ ವ್ಯಕ್ತಿ ಸಾವು; ಶಿರಾಲಿ ಬಳಿ ಮೃತದೇಹ ಪತ್ತೆ




