ಶಿರಸಿ : ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಮಹಿಳೆಯರಿಗೆ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುತ್ತಾ ಇಂದು ಮಹಿಳೆಯರ ಜೀವಕ್ಕೆ ಗ್ಯಾರಂಟಿ ಇಲ್ಲದ ದುಸ್ಥಿತಿ ರಾಜ್ಯಕ್ಕೆ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ೧೩ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ

ಅವರು ಶನಿವಾರ ಶಿರಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರತಿ ಸಂದರ್ಭದಲ್ಲಿಯೂ ಜನರಲ್ಲಿ ಮತೀಯ ಭಾವನೆ ಕೆರಳಿಸುತ್ತಿದೆ. ಜನರನ್ನು ಉದ್ರೇಕಗೊಳ್ಳುವಂತೆ ಮಾಡಿ ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಮತಗಳಿಕೆ ಮತ್ತು ಅಧಿಕಾರದ ಆಸೆಯ ಮೂಲ ಉದ್ದೇಶದಿಂದ ಹಿಂದೂ ಸಮಾಜವನ್ನು ಬಲಿ ಕೊಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.‌
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಸಮನಾಗಿ ನೋಡುವುದನ್ನು ಬಿಟ್ಟು ಓಲೈಕೆಯ ರಾಜಕಾರಣಕ್ಕೆ ಬಹುಸಂಖ್ಯಾತರ ಭಾವನೆಯನ್ನು ಕಾಂಗ್ರೆಸ್ ಧಿಕ್ಕರಿಸುತ್ತಿದೆ. ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮತದಾರರು ಜಾಗೃತರಾಗಿ ಯೋಚಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಹನುಮಾನ ಚಾಲೀಸ ಪಠಿಸಿದರೆ, ಜೈಶ್ರೀರಾಮ ಘೋಷಣೆ ಕೂಗಿದರೆ ಹಿಂದೂಗಳ ಮೇಲೆ ಕಾಂಗ್ರೆಸ್ ಸರ್ಕಾರ ಪ್ರಕರಣ ದಾಖಲಿಸುತ್ತದೆ. ನಮ್ಮ ಸನಾತನ ಧರ್ಮದ ಪವಿತ್ರ ಭಗವಾಧ್ವಜ ಹಾರಿಸಲು ಬಿಡುತ್ತಿಲ್ಲ. ನಮ್ಮ ರಾಜ್ಯದ ಪವಿತ್ರ ದೇಗುಲ ಎಂದು ಕರೆಯುವ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ ನಡೆಯುವುದಿಲ್ಲ ಎಂಬುದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಪರಮೇಶ್ವರ ಅರ್ಥಮಾಡಿಕೊಳ್ಳಬೇಕು. ಹಣ, ಗ್ಯಾರಂಟಿ, ಜಾತಿ, ಧರ್ಮವನ್ನು ಒಡೆದು ಆಳುವ ಸ್ವಾರ್ಥದ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ದಾರಿತಪ್ಪಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದರು.

ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯನ್ನು ಖಂಡಿಸುತ್ತೇನೆ. ಅಮಾನವೀಯ ಹೇಯ ಕೃತ್ಯವನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ವಿರೋಧಿಸಬೇಕಿದೆ. ಅವರ ಕುಟುಂಬದ ಜತೆ ಬಿಜೆಪಿ ಸದಾ ನಿಲ್ಲಲಿದೆ. ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಲೋಕಸಭಾ ಅಭ್ಯರ್ಥಿ.