ಭಟ್ಕಳ ಡೈರಿ ವರದಿ
ಭಟ್ಕಳ: ಮುರುಡೇಶ್ವರದ ಜನಾನುರಾಗಿ ವೈದ್ಯರು, ಸಾಹಿತ್ಯ ಪರಿಷತ್ತಿನ ಹಿರಿಯ ಆಜೀವ ಸದಸ್ಯರು ಹಾಗೂ ಯಕ್ಷರಕ್ಷೆಯ ಮೂಲಕ ಯಕ್ಷಗಾನ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿದ್ದ ಇತ್ತೀಚೆಗೆ ಅಗಲಿದ ಡಾ. ಐ.ಆರ್. ಭಟ್ ಅವರಿಗೆ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನುಡಿನಮನ ಸಲ್ಲಿಸಲಾಯಿತು.
ಮುರುಡೇಶ್ವರದ ಮಾನಾಸ್ಮೃತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ಐ.ಆರ್. ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮೂಲಕ ಗೌರವ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಎಸ್. ಕಾಮತ್ ಮಾತನಾಡಿ, ಡಾ. ಐ.ಆರ್. ಭಟ್ ಅವರೊಂದಿಗಿನ ಸುಮಾರು ೬೦ ವರ್ಷಗಳ ನಂಟನ್ನು ಸ್ಮರಿಸಿಕೊಂಡರು. ಅವರ ಮಾನವೀಯ ಗುಣಗಳು ಹಾಗೂ ಸಾಮಾಜಿಕ ಸೇವೆಯನ್ನು ನೆನಪಿಸಿಕೊಂಡರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಾತನಾಡಿ, ‘ವೈದ್ಯೋ ನಾರಾಯಣೋ ಹರಿ’ ಎಂಬ ಮಾತಿಗೆ ಅನುರೂಪವಾಗಿ ಡಾ. ಭಟ್ ಅವರು ಬದುಕಿದ್ದರು. ಯಕ್ಷರಕ್ಷೆಯ ಮೂಲಕ ಕಲೆ ಮತ್ತು ಕಲಾವಿದರನ್ನು ಬೆಳೆಸಲು ಅವರು ನೀಡಿದ ಕೊಡುಗೆ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ವೈದ್ಯರಾಗಿ ಜನರಿಗೆ ಮಾನವೀಯ ನೆಲೆಯಲ್ಲಿ ನೀಡಿದ ಸೇವೆ ಹಾಗೂ ಯಕ್ಷರಕ್ಷೆಯ ಮೂಲಕ ಸ್ಥಳೀಯ ಕಲಾಪ್ರಕಾರಗಳು ಮತ್ತು ಕಲಾವಿದರಿಗೆ ನೀಡಿದ ಪ್ರೋತ್ಸಾಹ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದು ಅವರು ಹೇಳಿದರು.
ಮಾನಾಸುತ ಶಂಭು ಹೆಗಡೆ ಮಾತನಾಡಿ, ತಮ್ಮ ತಂದೆ ಮಾಳ್ಕೊಡು ನಾರಾಯಣ ಹೆಗಡೆ ಅವರ ಸಾಹಿತ್ಯಕ ರಚನೆಗಳಿಗೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮಗಳಿಗೆ ಡಾ. ಐ.ಆರ್. ಭಟ್ ನೀಡಿದ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಂ.ವಿ. ಹೆಗಡೆ, ಮಾನಾಸುತ, ಗಣಪತಿ ಕಾಯ್ಕಿಣಿ, ನೇತ್ರಾವತಿ ಆಚಾರ್ಯ, ಪೂರ್ಣಿಮಾ ಕರ್ಕಿಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಕೆರೆಕಟ್ಟೆ, ಮಂಜುನಾಥ ಹೆಗಡೆ, ಯೋಗೇಶ ಹೆಗಡೆ, ಕೆ.ಬಿ. ಹೆಗಡೆ, ಶಿವಕುಮಾರ ಹಿಚ್ಕಡ್, ಗಣೇಶ ಯಾಜಿ ಸೇರಿದಂತೆ ಹಲವರು ಡಾ. ಐ.ಆರ್. ಭಟ್ ಅವರ ವಿವಿಧ ಕ್ಷೇತ್ರಗಳ ಕೊಡುಗೆಗಳನ್ನು ಸ್ಮರಿಸಿದರು.
ಆರಂಭದಲ್ಲಿ ಗಣಪತಿ ಕಾಯ್ಕಿಣಿ ಯಕ್ಷಗಾನದ ಹಾಡಿನ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಹಾಗೂ ಸಾಹಿತಿ ಶ್ರೀಧರ ಶೇಟ ಕಾರ್ಯಕ್ರಮ ನಿರೂಪಿಸಿ, ಡಾ. ಐ.ಆರ್. ಭಟ್ ಅವರ ಬಹುಮುಖ ವ್ಯಕ್ತಿತ್ವವನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಉದಯ ನಾಯಕ, ಮಾರುತಿ ನಾಯ್ಕ, ಪ್ರಕಾಶ ಭಟ್, ಪರಮೇಶ್ವರ್ ಎನ್. ಭಟ್, ಶಂಕರ್ ಭಟ್ರಹಿತ್ತಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:
ಜನಸೇವೆಯ ಜನಾನುರಾಗಿ ವ್ಯಕ್ತಿ ಮುರುಡೇಶ್ವರದ ವೈದ್ಯ ಇನ್ನಂಜೆ ರಾಜಗೋಪಾಲ ಭಟ್


