ಭಟ್ಕಳ ಡೈರಿ ವರದಿ
ಭಟ್ಕಳ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಹೊಣೆಗಾರಿಕೆಯಲ್ಲ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ರೂಪಶ್ರೀ ಹೇಳಿದರು. ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಹೊನ್ನಾವರ ವಿಭಾಗ ಹಾಗೂ ಭಟ್ಕಳ ಉಪವಿಭಾಗ ಅರಣ್ಯ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಡೆದ ವನ್ಯಜೀವಿ ಸಪ್ತಾಹ–೨೦೨೬ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗೀಶ್ ಸಿ.ಕೆ. ಮಾತನಾಡಿ, ರಸ್ತೆ ಬದಿಯಲ್ಲಿ ಕೋತಿಗಳು ಹಾಗೂ ಪಕ್ಷಿಗಳಿಗೆ ಆಹಾರ ನೀಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಮಾನವ ಆಹಾರಕ್ಕೆ ನಿರಂತರವಾಗಿ ಅವಲಂಬಿತವಾಗುವ ಪ್ರಾಣಿಗಳು ರಸ್ತೆ ಬದಿಗೆ ಬರುವುದರಿಂದ ವಾಹನಗಳ ಅಪಘಾತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚುತ್ತದೆ. ಇದು ಮಾನವ–ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ಎಚ್ಚರಿಸಿದರು.
ವನ್ಯಜೀವಿಗಳ ಅಂಗಾಂಗಗಳು ಅಥವಾ ಅವುಗಳಿಂದ ತಯಾರಿಸಿದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅದೃಷ್ಟ ಅಥವಾ ಒಳಿತು ಉಂಟಾಗುತ್ತದೆ ಎಂಬ ನಂಬಿಕೆಗಳಿಗೆ ವೈಜ್ಞಾನಿಕ ಆಧಾರವಿಲ್ಲ. ಇಂತಹ ಮೂಢನಂಬಿಕೆಗಳನ್ನು ತೊರೆದು ವನ್ಯಜೀವಿಗಳ ಬಗ್ಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಸಂದೇಶವೂ ನೀಡಲಾಯಿತು.
ಸಮುದ್ರ ಜೀವವೈವಿಧ್ಯ ಸಂರಕ್ಷಣೆಗೆ ಒತ್ತು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಮಾತನಾಡಿ, ಈ ಬಾರಿ ಅರಣ್ಯ ಪ್ರದೇಶಗಳಲ್ಲಿನ ವನ್ಯಜೀವಿಗಳ ಜತೆಗೆ ಸಮುದ್ರ ಜೀವವೈವಿಧ್ಯದ ಸಂರಕ್ಷಣೆಗೂ ಗಮನ ಹರಿಸಲಾಗುತ್ತಿದೆ. ಸಪ್ತಾಹದ ಅಂಗವಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಮನೆಮನೆಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಯುವ ಸಂಘಟನೆಗಳ ಸಹಭಾಗಿತ್ವ: ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ವಿವಿಧ ಸಾಮಾಜಿಕ ಹಾಗೂ ಯುವ ಸಂಘಟನೆಗಳು ಕೈಜೋಡಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿದೆ. ರೋಟರಿ, ಜೆಸಿಐ, ರೋಟ್ರಾಕ್ಟ್, ಎನ್ಎಸ್ಎಸ್ ಹಾಗೂ ಉನ್ನತ ಭಾರತ ಅಭಿಯಾನ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಿಂದ ಪರಿಸರ ಸಂರಕ್ಷಣೆಯ ಸಂದೇಶವನ್ನು ವ್ಯಾಪಕವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಉರಗ ರಕ್ಷಕರಿಗೆ ಸನ್ಮಾನ:
ವನ್ಯಜೀವಿ ಸಂರಕ್ಷಣೆ, ವಿಶೇಷವಾಗಿ ಉರಗಗಳ ರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಆರು ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಾನವ ವಸತಿ ಪ್ರದೇಶಗಳಿಗೆ ಪ್ರವೇಶಿಸುವ ಉರಗಗಳನ್ನು ಸುರಕ್ಷಿತವಾಗಿ ಹಿಡಿದು, ಯಾವುದೇ ಹಾನಿಯಾಗದಂತೆ ಸೂಕ್ತ ಸ್ಥಳಗಳಿಗೆ ಬಿಡುತ್ತಿರುವ ಅವರ ಸೇವೆಯನ್ನು ಗಣ್ಯರು ಪ್ರಶಂಸಿಸಿದರು.
ಹಿರಿಯ ನಾಗರಿಕರ ಸೇವೆಗೆ ಮೆಚ್ಚುಗೆ: ಪರಿಸರ ಸಂರಕ್ಷಣೆಯಲ್ಲಿ ಗಿಡ ನೆಡುವುದರಷ್ಟೇ ಅಲ್ಲದೆ, ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವುದೂ ಸಮಾನ ಮಹತ್ವ ಹೊಂದಿದೆ ಎಂಬುದಕ್ಕೆ ಭಟ್ಕಳದ ಹಿರಿಯ ನಾಗರಿಕ ಎಂ.ಆರ್. ನಾಯ್ಕ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ ಗುರುತಿಸಲಾಯಿತು. ಸ್ವಂತ ವೆಚ್ಚ ಹಾಗೂ ಶ್ರಮದಿಂದ ಗಿಡಗಳಿಗೆ ಬೇಲಿ ನಿರ್ಮಿಸಿ, ಅವುಗಳ ನಿರಂತರ ಆರೈಕೆಯಲ್ಲಿ ತೊಡಗಿರುವ ಅವರ ಪರಿಸರ ಕಾಳಜಿಯನ್ನು ಗಣ್ಯರು ಪ್ರಶಂಸಿಸಿದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಧೀಶೆ ಅರ್ಪಿತಾ, ಹೊನ್ನಾವರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಕಾಳಪ್ಪನವರ, ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಎನ್. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಪರಿಸರಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:
ದಸರಾ ಋತುವಿನಲ್ಲೇ ಬೆಂಗಳೂರು–ಕಾರವಾರ ಹಗಲು ರೈಲು ಸೇವೆ ರದ್ದು
ಕಳೆದೊಂದು ವಾರದ ಭಟ್ಕಳ: ಪೊಲೀಸ್ ಪ್ರಕರಣಗಳಿಂದ ಕ್ರೀಡಾ ಸಾಧನೆವರೆಗೆ ಏನಾಯಿತು?




