ಭಟ್ಕಳ ಡೈರಿ ವರದಿ
ಭಟ್ಕಳ: ಮದುವೆ ಇದೆ ಎಂದು ಹೇಳಿ ಪರಿಚಿತ ವ್ಯಕ್ತಿಯಿಂದ ಕಾರನ್ನು ಪಡೆದುಕೊಂಡು, ಬಳಿಕ ಕಾರನ್ನು ವಾಪಸ್ ನೀಡದೆ ಶಿರಾಳಕೊಪ್ಪದಲ್ಲಿ ಅಡವಿಟ್ಟಿರುವುದಾಗಿ ಆರೋಪಿಸಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಬ್ದುಲ್ ಬಾರಿ ಗಾರ್ಡನ್, ಹಂಜಾನಗರ ೧ನೇ ಕ್ರಾಸ್ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಮಾವಿಜ್ ಮೊತೇಶಾಮ್ (೩೧) ಅವರು ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಬದ್ರಿಯಾ ಕಾಲನಿ ನಿವಾಸಿ ಹಸನ್ ಶಬ್ಬರ ಎಂಬಾತನು ಮನೆಯಲ್ಲಿ ಮದುವೆ ಕಾರ್ಯಕ್ರಮವಿದೆ ಎಂದು ಹೇಳಿ, ಜೂನ್ ೧೭ರಂದು ಸಂಜೆ ಸುಮಾರು ೫ ಗಂಟೆಗೆ ಫಿರ್ಯಾದಿಯ ಮನೆಯಿಂದ ಕೆಎ-೩೬/ಪಿ-೫೫೩೧ ನೋಂದಣಿ ಸಂಖ್ಯೆಯ ಕಾರನ್ನು ಪಡೆದುಕೊಂಡಿದ್ದಾನೆ. ಆದರೆ ಕಾರನ್ನು ಪಡೆದುಕೊಂಡ ಬಳಿಕ ಈವರೆಗೆ ವಾಪಸ್ ನೀಡಿಲ್ಲ. ಅಲ್ಲದೆ, ಆರೋಪಿ ಕಾರನ್ನು ಶಿರಾಳಕೊಪ್ಪದಲ್ಲಿ ಯಾರ ಬಳಿಯೋ ಅಡವಿಟ್ಟಿರುವುದಾಗಿ ಫಿರ್ಯಾದಿಗೆ ತಿಳಿದುಬಂದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾರನ್ನು ಮರಳಿಸದೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ, ಹಸನ್ ಶಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ಮಾವಿಜ್ ಮೊತೇಶಾಮ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ ೨೮ರಂದು ಸಂಜೆ ೬.೩೦ಕ್ಕೆ ದೂರು ಸಲ್ಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ :
ಭಟ್ಕಳದಲ್ಲಿ ನಿಲ್ಲಿಸಿದ್ದ ಟ್ರಾವೆಲರ್ ಮಿನಿ ಬಸ್ ಕಳವು
ಭಟ್ಕಳದಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಹಲ್ಲೆ; ಕತ್ತಿಯಿಂದ ಕೊಲೆ ಬೆದರಿಕೆ ಆರೋಪ


