ಭಟ್ಕಳ ಡೈರಿ ವರದಿ

ಭಟ್ಕಳ: ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಇಬ್ಬರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಪ್ರಕಾರ, ಭಟ್ಕಳದ ನಿವಾಸಿ ರೋಹಿಣಿ ಕೋಂ ವೆಂಕಟೇಶ ನಾಯ್ಕ (೪೨) ಕೂಲಿ ಕಾರ್ಮಿಕೆಯಾಗಿದ್ದು, ಸೆಪ್ಟೆಂಬರ್ ೨೮ರಂದು ಮಧ್ಯಾಹ್ನ ಸುಮಾರು ೧೨.೩೦ರ ವೇಳೆಗೆ ಕೋಕ್ತಿ ನಗರ ಕಡೆಯಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಭಟ್ಕಳ ಈದ್ಗಾ ಮೈದಾನದ ಸಮೀಪ ದೇವೇಂದ್ರ ನಾಯ್ಕ ಅವರ ಅಂಗಡಿಯ ಬಳಿ ನಿಂತಿದ್ದ ಜಾಲಿಯವರಾದ ಪರಮೇಶ್ವರ ರಾಮ ನಾಯ್ಕ ಹಾಗೂ ರವಿ ನಿಂಗಪ್ಪ ನಾಯ್ಕ ಎಂಬುವರು ಸ್ಕೂಟಿಗೆ ಅಡ್ಡಗಟ್ಟಿ ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಗಳು ದನಕ್ಕೆ ಸಂಬಂಧಿಸಿದ ವಿಚಾರವಾಗಿ ರೋಹಿಣಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೋಹಿಣಿ ಅವರು ತಾವು ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದು ಹೇಳುತ್ತಿದ್ದಾಗ, ಆರೋಪಿಗಳು ತಮ್ಮೊಂದಿಗೆ ಬುದ್ಧಿ ಹೇಳುತ್ತೀಯಾ ಎಂದು ಪ್ರಶ್ನಿಸಿ ಜಗಳಕ್ಕೆ ಮುಂದಾದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳ ಪೈಕಿ ಪರಮೇಶ್ವರ ರಾಮ ನಾಯ್ಕ ಹೆಲ್ಮೆಟ್‌ನಿಂದ ರೋಹಿಣಿ ಅವರ ತಲೆಗೆ ಹೊಡೆದಿದ್ದಾನೆ. ಮತ್ತೊಬ್ಬ ಆರೋಪಿ ರವಿ ನಾಯ್ಕ ಅವರು ಅವರ ಕೈ ಹಿಡಿದು ತಿರುಗಿಸಿ ಕೆಳಗೆ ದೂಡಿದ್ದಾನೆ. ಘಟನೆ ಗಮನಿಸಿದ ಅಕ್ಕಪಕ್ಕದವರು ಸ್ಥಳಕ್ಕೆ ಬಂದು ಜಗಳ ಬಿಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಸ್ಥಳದಿಂದ ತೆರಳುವ ಸಂದರ್ಭದಲ್ಲಿ ಆರೋಪಿಗಳು, ದನ ತಮ್ಮದು ಎಂದು ಹೇಳುತ್ತಾ ಬಂದರೆ ಕೊಲೆ ಮಾಡಿ ಬಿಸಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರೋಹಿಣಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಯ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: 

ಭಟ್ಕಳಕ್ಕೆ ಸತತ ನಾಲ್ಕನೇ ಬಾರಿ ಜಿಲ್ಲಾ ಸಮಗ್ರ ವೀರಾಗ್ರಣಿ ಪ್ರಶಸ್ತಿ

‘ಕೇಸಿಗೆ ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ’: ಶ್ರೀಕಾಂತ ನಾಯ್ಕ

ಗೊರಟೆ ಕ್ರಾಸ್‌ನಲ್ಲಿ ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ಕಾರ್ಮಿಕನಿಗೆ ಗಾಯ

ಭಟ್ಕಳದಲ್ಲಿ ನಾಯಿ ಅಡ್ಡ ಬಂದು ಸ್ಕೂಟಿ ಅಪಘಾತ: ವ್ಯಕ್ತಿಗೆ ತೀವ್ರ ಗಾಯ