ಭಟ್ಕಳ ಡೈರಿ ವರದಿ

ಭಟ್ಕಳ: ಕತ್ತಿಯಿಂದ ಕೈಕಾಲು ಕಡಿಯುವುದಾಗಿ ಹಾಗೂ ಕೊಲೆ ಮಾಡುವುದಾಗಿ ವಾಟ್ಸ್ಅಪ್ ಮೂಲಕ ಬೆದರಿಕೆ ಹಾಕಿ, ಬಳಿಕ ವ್ಯಕ್ತಿಯೊಬ್ಬರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಆರೋಪದಡಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಟ್ಕಳ ನಿವಾಸಿ, ಹೈನುಗಾರಿಕೆ ವೃತ್ತಿಯ ಪರಮೇಶ್ವರ ರಾಮ ನಾಯ್ಕ (೫೩) ಅವರು ನೀಡಿದ ದೂರಿನ ಆಧಾರದ ಮೇಲೆ ಭಟ್ಕಳದ ರೋಹಿಣಿ ಕೋಂ ವೆಂಕಟೇಶ ನಾಯ್ಕ (೪೨) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದೂರಿನ ಪ್ರಕಾರ, ಆರೋಪಿತಳು ತಾನು ಕತ್ತಿಯನ್ನು ಗಾಡಿಯಲ್ಲಿ ಇಟ್ಟುಕೊಂಡು ತಿರುಗಾಡುತ್ತಿರುವುದಾಗಿ ಹಾಗೂ ಪರಮೇಶ್ವರ ನಾಯ್ಕ ಮತ್ತು ಅವರ ಮಗ ಸಿಕ್ಕರೆ ಕತ್ತಿಯಿಂದ ಕಡಿಯುವುದಾಗಿ ವಾಟ್ಸ್ಅಪ್ ಸಂದೇಶ ಕಳುಹಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಇದಲ್ಲದೆ, ಇಬ್ಬರ ಕೈಕಾಲು ಕಡಿಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ ೨೮ರಂದು ಮಧ್ಯಾಹ್ನ ಸುಮಾರು ೧೨.೩೦ರ ವೇಳೆಗೆ ಪರಮೇಶ್ವರ ನಾಯ್ಕ ಅವರು ದೇವೇಂದ್ರ ನಾಯ್ಕ ಅವರ ಕಂಪ್ಯೂಟರ್ ಸೆಂಟರ್‌ನಲ್ಲಿ ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಲು ನಿಂತಿದ್ದಾಗ ಆರೋಪಿತಳು ಅಲ್ಲಿಗೆ ಬಂದಿದ್ದಾಳೆ ಎನ್ನಲಾಗಿದೆ. ಈ ವೇಳೆ ಆರೋಪಿತಳು ಪರಮೇಶ್ವರ ನಾಯ್ಕ ಅವರನ್ನು ಅಡ್ಡಗಟ್ಟಿ ತಡೆದು, ಚಪ್ಪಲಿಯಿಂದ ದವಡೆಗೆ ಹೊಡೆದಿದ್ದಾಳೆ. ಇದರಿಂದ ಅವರ ತುಟಿಗೆ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಂತರ ಪರಮೇಶ್ವರ ನಾಯ್ಕ ಹಾಗೂ ಅವರ ಮಗನನ್ನು ಕತ್ತಿಯಿಂದ ಕೈಕಾಲು ಕಡಿಯುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಪರಮೇಶ್ವರ ನಾಯ್ಕ ಅವರ ಪತ್ನಿ ಹಾಗೂ ಮನೆಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಂದ ತೆರಳಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ಪರಮೇಶ್ವರ ರಾಮ ನಾಯ್ಕ ಅವರು ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : 

ಸ್ಕೂಟಿಗೆ ಅಡ್ಡಗಟ್ಟಿ ಮಹಿಳೆ ಮೇಲೆ ಹಲ್ಲೆ; ಇಬ್ಬರ ವಿರುದ್ಧ ದೂರು

ಭಟ್ಕಳಕ್ಕೆ ಸತತ ನಾಲ್ಕನೇ ಬಾರಿ ಜಿಲ್ಲಾ ಸಮಗ್ರ ವೀರಾಗ್ರಣಿ ಪ್ರಶಸ್ತಿ

‘ಕೇಸಿಗೆ ಹೆದರುವುದಿಲ್ಲ, ಹೋರಾಟ ಮುಂದುವರಿಸುತ್ತೇನೆ’: ಶ್ರೀಕಾಂತ ನಾಯ್ಕ