ಭಟ್ಕಳ ಡೈರಿ ವರದಿ
ಭಟ್ಕಳ: ರಾಷ್ಟ್ರೀಯ ಹೆದ್ದಾರಿ-೬೬ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಬಿಳಿ ಬಣ್ಣದ ಟ್ರಾವೆಲರ್ ಮಿನಿ ಬಸ್ವೊಂದು ಕಳವಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳತನ ಮಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಭಟ್ಕಳ ನಿವಾಸಿ ಕೃಷ್ಣ ತಂದೆ ಅನಂತ ನಾಯ್ಕ (೩೫) ಅವರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಕೃಷ್ಣ ಅವರಿಗೆ ಸೇರಿದ ಬಿಳಿ ಬಣ್ಣದ ಟ್ರಾವೆಲರ್ ಮಿನಿ ಬಸ್ (ಕೆಎ-೪೭/೭೮೩೮) ಅನ್ನು ಭಟ್ಕಳದ ಮಣ್ಣುಳಿ ರಾಷ್ಟ್ರೀಯ ಹೆದ್ದಾರಿ-೬೬ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.
ಸೆಪ್ಟೆಂಬರ್ ೨೭ರಂದು ಬೆಳಿಗ್ಗೆ ೧೧ ಗಂಟೆಯಿಂದ ಸೆಪ್ಟೆಂಬರ್ ೨೮ರಂದು ಮಧ್ಯಾಹ್ನ ೧೨.೩೦ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮಿನಿ ಬಸ್ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ವಾಹನದ ಮಾಲೀಕರು ಭಟ್ಕಳ ಶಹರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ಕಳವಾಗಿರುವ ಮಿನಿ ಬಸ್ನ್ನು ಪತ್ತೆಹಚ್ಚಿ, ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:
ಭಟ್ಕಳದಲ್ಲಿ ವ್ಯಕ್ತಿಗೆ ಚಪ್ಪಲಿಯಿಂದ ಹಲ್ಲೆ; ಕತ್ತಿಯಿಂದ ಕೊಲೆ ಬೆದರಿಕೆ ಆರೋಪ


